Site icon Vistara News

ಭಿಕ್ಷೆ ಬೇಡುತ್ತಿದ್ದ ಅನಾಥ ಬಾಲಕಿಗೆ SSLCಯಲ್ಲಿ 96% ಅಂಕ

SONU

ಸೋನು

ಬೆಂಗಳೂರು: ಹೆತ್ತವರಿಲ್ಲದ ಕೊರಗು, ಬಡತನದ ನಡುವೆ ವಿದ್ಯಾರ್ಥಿನಿಯೊಬ್ಬಳು (orphan girl) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.

ಬೆಂಗಳೂರಿನ ಹೆಸರಘಟ್ಟದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ನಿವಾಸಿ ಸೋನು ಸಾಧಕಿಯಾಗಿದ್ದಾಳೆ. ಬೆಂಗಳೂರಿನ ಸಹಕಾರ ನಗರದ ಗುಂಡಾಂಜನೇಯ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ಈ ಬಾಲಕಿಯನ್ನು 2013ರಲ್ಲಿ ಹೆಸರಘಟ್ಟದ ಸ್ಪರ್ಶಾ ಟ್ರಸ್ಟ್‌ ರಕ್ಷಿಸಿ ಆಶ್ರಯ ನೀಡಿತ್ತು. ಟ್ರಸ್ಟ್‌ನ ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿದ ಸೋನು ನಿರಂತರ ಅಧ್ಯಯನದಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 96.32% ಅಂಕ ಗಳಿಸಿದ್ದಾಳೆ.

ಅನಾಥ ಬಾಲಕಿ ಸಾಫ್ಟ್‌ವೇರ್ ಇಂಜಿನಿಯರ್ ಆಗುವ ಕನಸು ಹೊತ್ತಿದ್ದು, ಇದನ್ನು ನನಸು ಮಾಡಲು ಸ್ಪರ್ಶಾ ಟ್ರಸ್ಟ್ ಸಹಾಯ ಮಾಡುತ್ತಿದೆ. ವಿದ್ಯಾರ್ಥಿನಿ ಸಾಧನೆಗೆ ಟ್ರಸ್ಟ್‌ನ ಸಂಸ್ಥಾಪಕ ಗೋಪಿನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋನು ಪ್ರತಿಭಾವಂತೆಯಾಗಿದ್ದು, ಚಿತ್ರಕಲೆ, ಟೇಲರಿಂಗ್‌, ಕರಕುಶಲ ಕಲೆ, ಕ್ರೀಡೆಗಳಲ್ಲಿ ಉತ್ತಮ ಕೌಶಲ್ಯ ಹೊಂದಿದ್ದಾಳೆ. ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇರುವ ಬಾಲಕಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಕೀರ್ತಿ ತಂದಿದ್ದಾಳೆ ಎಂದು ಸ್ಪರ್ಶಾ ಟ್ರಸ್ಟ್‌ ಆರೈಕೆ ಸಿಬ್ಬಂದಿ ಕಮಳಾ ತಿಳಿಸಿದ್ದಾರೆ.

ಬಾಲಕಿ ಸುಮಾರು 8 ವರ್ಷದವಳಾಗಿದ್ದಾಗ‌ ಸ್ಪರ್ಶಾ ಟ್ರಸ್ಟ್ ರಕ್ಷಣೆ ಮಾಡಿ ಆಕೆಯ ವಸತಿ, ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಬಾಲಕಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 96.32% ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಬಾಲಕಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗುವ ಕನಸು ಹೊಂದಿದ್ದು, ಆಕೆಯ ಕನಸು ನನಸಾಗಲು ಟ್ರಸ್ಟ್‌ ಸಹಕಾರ ನೀಡಲಿದೆ.‌

| ಗೋಪಿನಾಥ್‌, ಸ್ಪರ್ಶಾ ಟ್ರಸ್ಟ್‌ ಅಧ್ಯಕ್ಷ, ಹೆಸರಘಟ್ಟ

Exit mobile version