ಕೊಡಗು: ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ತಟದ ಗ್ರಾಮಸ್ಥರು ಸಂಚರಿಸಲು ಬಹಳ ತೊಂದರೆಯಾಗಿದೆ. ಕೆಲವಡೆ ರಸ್ತೆ ಮಾರ್ಗ ಇಲ್ಲದೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳಲು ಹಾಗೂ ಆರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗೆ ಹೋಗಲೂ ತೊಡಕಾಗುತ್ತಿದೆ. ಹೀಗಾಗಿ ಅನಾರೋಗ್ಯದಿಂದ ನರಳುತ್ತಿದ್ದ ಮಂಗಳವಾರ ಮಹಿಳೆಯನ್ನು ತೆಪ್ಪದ ಮೂಲಕ ದಾಟಿಸಿ, ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಓಡಾಟಕ್ಕೆ ಸಮಸ್ಯೆಯಾಗಿದೆ. ಕಾಲಿಗೆ ಪೆಟ್ಟಾಗಿ ಅನಾರೋಗ್ಯದಿಂದ ನರಳುತ್ತಿರುವ ಶೇಷಮ್ಮ ಎಂಬುವವರನ್ನು ಮಂಗಳವಾರ ತೆಪ್ಪದ ಮೂಲಕ ನದಿ ದಾಟಿಸಿ ನಂತರ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿಯುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದ್ದು, ಗ್ರಾಮದ ಬಳಿ ಸೇತುವೆ ನಿರ್ಮಿಸುವಂತೆ ಕಳೆದ 10 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಅಧಿಕಾರಿಗಳು ಒಂದು ತೆಪ್ಪ ನೀಡಿ ಸುಮ್ಮನಾಗುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಕಂಡಿ ಪರಂಬು ನಡುವಟ್ಟಿರ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Rain News | ರಾಜ್ಯದ ಹಲವೆಡೆ ಮುಂದುವರಿದ ಮಳೆ: ಶಾಲಾ ಕಟ್ಟಡ ಕುಸಿತ, ಆಕಳು-ಕರುಗಳ ಸಾವು