ಬೆಳಗಾವಿ: ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದ್ದ ಕೊಲ್ಹಾಪುರದ ಇಬ್ಬರನ್ನು, ರಾಷ್ಟ್ರೀಯ ತನಿಖಾ ದಳದಿಂದ(ಎನ್‌ಐಎ) ದಿನಪೂರ್ತಿ ವಿಚಾರಣೆ ನಡೆಸಿದ ಬಳಿಕ ಭಾನುವಾರ ಮನೆಗೆ ಕಳಿಸಲಾಗಿದೆ. ಭಟ್ಕಳದಲ್ಲಿ ಎನ್‌ಐಎ ವಶಕ್ಕೆ ಪಡೆದಿದ್ದ ಇಬ್ಬರನ್ನೂ ಮನೆಗೆ ಕಳಿಸಲಾಗಿದೆ ಎನ್ನಲಾಗಿದೆ.
ಶನಿವಾರ ತಡರಾತ್ರಿ ಏಕಾಏಕಿ ಎನ್‌ಐಎ ತಂಡ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಹುಪ್ಪರಿ ಗ್ರಾಮದ ಬೆಳ್ಳಿಯ ವ್ಯಾಪಾರಿ ಸಹೋದರರಾದ ಇರ್ಷಾದ್ ಶೇಖ್(35) ಹಾಗೂ ಆತನ ಸಹೋದರ ಅಲ್ತಾಫ್ ಶೇಖ್(30) ಎಂಬುವವರನ್ನು ವಶಕ್ಕೆ ಪಡೆದಿತ್ತು.
ಇದನ್ನೂ ಓದಿ | Amravati murder: ಕೆಮಿಸ್ಟ್ ಕೊಲ್ಹೆ ಕೊಲೆಯ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ
ಈ ಇಬ್ಬರು ಸಹೋದರರು ಬೆಳ್ಳಿಯ ವ್ಯಾಪಾರ ಮಾಡಿಕೊಂಡಿದ್ದು, ಹಲವು ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ಅವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಹುಪ್ಪರಿಯ ಅಂಬಾಬಾಯಿ ನಗರದಲ್ಲಿರುವ ಶೇಖ್ ಸಹೋದರರ ಮನೆಯ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡುತ್ತಿದ್ದಂತೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಲಬೈಕ್ ಹೆಲ್ಪ್ ಪೌಂಡೇಷನ್ ಹೆಸರಿನಲ್ಲಿ ಸಮಾಜ ಸೇವಾ ಸಂಸ್ಥೆ ನಡೆಸುತ್ತಿದ್ದ ಶೇಖ್ ಸಹೋದರರ ಮನೆಯ ಮೇಲಿನ ದಾಳಿ ದೇಶಾದ್ಯಂತ ಸುದ್ದಿಯಾಗಿತ್ತು.
ಇದೀಗ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಇಬ್ಬರನ್ನು ಎನ್‌ಐಎ ಪೊಲೀಸರು ಮನೆಗೆ ಕಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದ ಇರ್ಷಾದ್ ಇಡೀ ದಿನದ ವಿಚಾರಣೆ ಬಳಿಕ ಮನೆಗೆ ಬಂದಾಗ ಕಣ್ಣೀರಿಟ್ಟಿದ್ದಾರೆ. ಎನ್‌ಐಎ ತನಿಖೆಯಲ್ಲಿ ಇವರಿಂದ ಯಾವ ಮಾಹಿತಿ ಕಲೆಹಾಕಲಾಗಿದೆ ಎಂಬುವುದು ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ | ಕೊಲ್ಹಾಪುರದಲ್ಲಿ ಶಂಕಿತ ಉಗ್ರರ ಕಚೇರಿಗೆ ನುಗ್ಗಿ ಪುಡಿಗಟ್ಟಿದ ಗ್ರಾಮಸ್ಥರು
ಭಟ್ಕಳ ನಿವಾಸಿ ವಿಚಾರಣೆ
ಕಾರವಾರ: ಐಸಿಸ್ ನಂಟಿನ ಶಂಕೆಯ ಮೇರೆಗೆ ವಶಕ್ಕೆ ಪಡೆದಿದ್ದ ಭಟ್ಕಳ ಮೂಲದ ಇಬ್ಬರೂ ವ್ಯಕ್ತಿಗಳನ್ನು ಎನ್ಐಎ ತಂಡ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ. ಭಾನುವಾರ ಬೆಳಿಗ್ಗೆ ಭಟ್ಕಳ ಪಟ್ಟಣದ ನಿವಾಸಿ ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರನನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಐಸಿಸ್ ಬರಹಗಳನ್ನು ಭಾಷಾಂತರ ಮಾಡುತ್ತಿದ್ದ ಶಂಕೆ ಹಿನ್ನಲೆಯಲ್ಲಿ ಮನೆಯಲ್ಲಿ ಇರುವಾಗಲೇ ಗುಪ್ತಚರ, ಸ್ಥಳೀಯ ಪೊಲೀಸರ ಸಹಕಾರದಿಂದ ದಾಳಿ ನಡೆಸಿದ್ದರು.
ಬಳಿಕ ಗುಪ್ತ ಸ್ಥಳದಲ್ಲಿ ಸುದೀರ್ಘ ವಿಚಾರಣೆ ನಡೆಸಿ, ವಶಕ್ಕೆ ಪಡೆದಿದ್ದ ಇಬ್ಬರನ್ನೂ ಸಂಜೆ ವೇಳೆಗೆ ಮನೆಗೆ ಕಳಿಸಲಾಗಿದೆ ಎನ್ನಲಾಗಿದೆ. ಅದರಲ್ಲಿ ಅಬ್ದುಲ್ ಮುಕ್ತದೀರ್‌ನಿಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಕರೆದಾಗ ಹಾಜರಾಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ವಶಕ್ಕೆ ಪಡೆದಿದ್ದ ಮುಕ್ತದೀರ್ ವಿರುದ್ಧ ಉಗ್ರ ಚಟುವಟಿಕೆ ಸಂಬಂಧ ಇರುವ ಕುರಿತು ಹೆಚ್ಚಿನ ಸಾಕ್ಷ್ಯಗಳು ಎನ್‌ಐಗೆ ತನಿಖೆ ವೇಳೆ ಲಭ್ಯವಾಗಿಲ್ಲ. ಹೀಗಾಗಿ ಆತನ ಮೊಬೈಲ್ ಡೇಟಾ ಸೇರಿ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಸಂಜೆಯ ವೇಳೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತುಮಕೂರು ವೈದ್ಯಕೀಯ ವಿದ್ಯಾರ್ಥಿ ವಿಚಾರಣೆ ಮುಕ್ತಾಯ
ತುಮಕೂರು: ಉಗ್ರ ಸಂಘಟನೆ ಜತೆಗೆ ನಂಟು ಹೊಂದಿದ್ದ ಆರೋಪದಲ್ಲಿ ನಗರದಲ್ಲಿ ವಶಕ್ಕೆ ಪಡೆದಿದ್ದ ವೈದ್ಯಕೀಯ ವಿದ್ಯಾರ್ಥಿ ಸಾಜೀದ್ ಇಸ್ಮಾಯಿಲ್‌ನನ್ನು ವಿಚಾರಣೆ ನಡೆಸಿದ ಬಳಿಕ ಎನ್ಐಎ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾಜೀದ್ ಪ್ರತಿಕ್ರಿಯಿಸಿ, ಮಹಾರಾಷ್ಟ್ರದ ಮೂಲದ ನಾನು ತುಮಕೂರಿನ ಯುನಾನಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಎನ್ಐಎ ಅಧಿಕಾರಿಗಳು ವಿಚಾರಣೆಗಾಗಿ ನನ್ನನ್ನು ಕರೆದೊಯ್ದಿದ್ದರು. ಅಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕೆಲಸ, ವಿಳಾಸ, ಕುಟುಂಬದ ಮಾಹಿತಿ ಹಾಗೂ ಈ ಹಿಂದೆ ವಿದ್ಯಾಭ್ಯಾಸ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಮತ್ತೆ ಎನ್ಐಎ ಅಧಿಕಾರಿಗಳು ವಿಚಾರಣೆಗೆ ಕರೆದರೆ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾನೆ.
ಇದನ್ನೂ ಓದಿ | ಕೊಲ್ಹಾಪುರದಲ್ಲಿ ಶಂಕಿತ ಉಗ್ರರ ಕಚೇರಿಗೆ ನುಗ್ಗಿ ಪುಡಿಗಟ್ಟಿದ ಗ್ರಾಮಸ್ಥರು