| ಸುರೇಶ ನಾಯ್ಕ, ಹಾವೇರಿ
ರಾಜ್ಯದಲ್ಲೇ ಮೊದಲ ಡೋಮ್ ಥಿಯೇಟರ್ ಅನ್ನು ಹಾವೇರಿ ನಗರದಲ್ಲಿ ನಿರ್ಮಿಸಲಾಗಿದೆ. ಗುಮ್ಮಟ ಮಾದರಿಯ ಚಿತ್ರಮಂದಿರವನ್ನು ಜಿಲ್ಲೆಯಲ್ಲಿ ಆರಂಭಿಸಿರುವುದು ಸಿನಿ ರಸಿಕರ ಕ್ರೇಜ್ ಹೆಚ್ಚಿಸಿದೆ. ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಗುಮ್ಮಟ ಮಾದರಿಯ ಚೋಟು ಮಹಾರಾಜ್ ಚಿತ್ರಮಂದಿರವು ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದೆ. ಇಲ್ಲಿ ಬಗೆಬಗೆಯ ಆಹಾರ ಸೇವಿಸುತ್ತ ಸಿನಿಮಾ ವೀಕ್ಷಿಸಬಹುದಾಗಿದೆ.
‘ಡೋಮ್ ಥಿಯೇಟರ್’ನಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈ ಮೂಲದ ಚೋಟು ಮಹಾರಾಜ್ ಸಿನಿ ಕೆಫೆಯವರು ರಾಜ್ಯದಲ್ಲೇ ಮೊದಲ ಗುಮ್ಮಟ ಮಾದರಿ ಚಿತ್ರಮಂದಿರವನ್ನು ಹಾವೇರಿ ನಗರದ ಓಲ್ಡ್ ಪಿ.ಬಿ.ರಸ್ತೆಯ ಹೊರವಲಯದಲ್ಲಿ ನಿರ್ಮಾಣ ಮಾಡಿದ್ದಾರೆ. ಅರ್ಧಗೋಳಾಕಾರದಲ್ಲಿರುವ ಈ ಚಿತ್ರಮಂದಿರದ ವಿನ್ಯಾಸ ನೋಡುಗರ ಗಮನ ಸೆಳೆಯುತ್ತಿದೆ. 42 ಅಡಿ ಸುತ್ತಳತೆ ಮತ್ತು 26 ಅಡಿ ಎತ್ತರವಿದ್ದು, 100 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.
ಮಲ್ಪಿಪ್ಲೆಕ್ಸ್ ಚಿತ್ರಮಂದಿರಗಳು ಸಿನಿ ರಸಿಕರನ್ನು ಸೆಳೆಯುತ್ತಿರುವಾಗಲೆ, ಹವಾನಿಯಂತ್ರಿತ ಮತ್ತು ಡಿಟಿಎಸ್ ಸೌಲಭ್ಯಗಳನ್ನೊಳಗೊಂಡ ಈ ಗುಮ್ಮಟ ಚಿತ್ರಮಂದಿರ ಏಕಪರದೆ ಒಳಗೊಂಡಿರುವುದು ವಿಶೇಷವಾಗಿದೆ. ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಈ ಮಾದರಿಯ ಸಿನಿ ರೆಸ್ಟೋರೆಂಟ್‌ಗಳು ಸಕ್ಸಸ್ ಆಗಿವೆ. ಬಾಗಲಕೋಟೆ, ದಾವಣಗೆರೆ ಮುಂತಾದ ಕಡೆ ಪ್ರಾಂಚೈಸಿಗಳನ್ನು ಪಡೆಯಲಾಗಿದ್ದು, ಹಾವೇರಿಯಲ್ಲಿ ರಾಜ್ಯದ ಮೊದಲ ಚಿತ್ರಮಂದಿರ ನಿರ್ಮಾಣ ಪೂರ್ಣಗೊಂಡು ಚಿತ್ರ ಪ್ರದರ್ಶನ ಆರಂಭವಾಗಿದೆ. ಜೂನ್ 10ರಿಂದ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಸಿನಿ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ನಿತ್ಯ 4 ಪ್ರದರ್ಶನಗಳು ನಡೆಯುತ್ತಿದ್ದು, ಟಿಕೆಟ್ ದರ ₹ 150ರಿಂದ 200 ಇದೆ. ಗುಣಮಟ್ಟದ ಆಹಾರ ಪೂರೈಸಲಾಗುತ್ಗಿದೆ. ಬುಕ್ ಮೈ ಶೋ ಮೂಲಕವೂ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಲಾಗುತ್ತಿದೆ.
ಚಿತ್ರಮಂದಿರಗಳು ತಮ್ಮ ಗುಣಮಟ್ಟವನ್ನು ಸುಧಾರಿಸಿಕೊಳ್ಳದಿದ್ದಾಗ ಪ್ರೇಕ್ಷಕರು ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡಿದರು. ಮಲ್ಟಿಪ್ಲೆಕ್ಸ್‌ಗಳು ಮತ್ತು ಮಿನಿಪ್ಲೆಕ್ಸ್‌ಗಳು ಐಷಾರಾಮಿ ಸೇವೆಯಿಂದ ಸಿನಿಪ್ರಿಯರನ್ನು ರಂಜಿಸಿಸುತ್ತಿವೆ. ಹಾವೇರಿ ಜನ ಪಿವಿಆರ್‌ನಲ್ಲಿ ಸಿನಿಮಾ ನೋಡಲು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಿದ್ದರು. ಇನ್ನು ಮುಂದೆ ಹಾವೇರಿ ನಗರದಲ್ಲೇ ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.
ಥಿಯೇಟರ್ ಬಹಳ ಚೆನ್ನಾಗಿದೆ. ಮನೆಯಂತೆಯೇ ಕುಳಿತು ಆರಾಮವಾಗಿ ಸಿನಿಮಾ ನೋಡಬಹುದು. ಯಾವುದೇ ನೂಕು ನುಗ್ಗಲು ಇರುವುದಿಲ್ಲ, ಮಕ್ಕಳು ಆಟವಾಡಿಕೊಳ್ಳಲು ಜಾಗವಿದೆ. ಇತರ ನಗರಗಳಿಗೆ ಹೋಗಿ ಸಿನಿಮಾ ನೋಡುವ ಬದಲಿಗೆ ಇಲ್ಲೇ ನೋಡಬಹುದು ಎಂದು ಪ್ರಕ್ಷಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ | ಹಾವೇರಿಯಲ್ಲಿ ಕಂಟ್ರೀಮೇಡ್ ಗನ್ ಸಪ್ಲೈ ಮಾಡುತ್ತಿದ್ದವರ ಬಂಧನ!