ಹೊಸಪೇಟೆ: ಸ್ವಾಂತಂತ್ರ್ಯ ದಿನಾಚರಣೆಯಂದು (Independence Day) ನಗರದಲ್ಲಿ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಅತಿ ಎತ್ತರದ ಧ್ವಜ ಸ್ತಂಭ ಲೋಕಾರ್ಪಣೆಯಾಗಿದ್ದು, ಬರೋಬ್ಬರಿ 405 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ವಿಜಯನಗರ ಧ್ವಜಾರೋಹಣ ಉಸ್ತುವಾರಿ ಸಚಿವ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಿದ್ದಾರೆ. 120×80 ಅಡಿ ಗಾತ್ರದ ತಿರಂಗಾ ಸ್ವಚ್ಛಂದವಾಗಿ ಬಾನಂಗಳದಲ್ಲಿ ಹಾರಾಡುತ್ತಿದೆ.
ಬಳ್ಳಾರಿಯಿಂದ ವಿಭಜನೆಯಾಗಿ ಹೊಸ ಜಿಲ್ಲೆಯಾಗಿ ವಿಜಯನಗರ ರಚನೆಯಾದ ಸಂದರ್ಭದಲ್ಲಿ ಅತಿ ಎತ್ತರದ ಧ್ವಜ ಸ್ತಂಭ ನಿರ್ಮಾಣ ಮಾಡಿ ಧ್ವಜಾರೋಹಣ ಮಾಡುವುದಾಗಿ ಕಳೆದ ವರ್ಷ ಆನಂದ್ ಸಿಂಗ್ ಹೆಳಿದ್ದರು. ನೂತನ ಜಿಲ್ಲೆ ಉದಯವಾದ ಮೇಲೆ ಆಗಸ್ಟ್ 15ರಂದೇ ದೇಶದ ಎತ್ತರದ ಬೃಹತ್ ಧ್ವಜ ಸ್ತಂಭದ ಮೇಲೆ ಧ್ವಜಾರೋಹಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಧ್ವಜ ಸ್ತಂಭದಲ್ಲಿ ಪ್ರಾಯೋಗಿಕ ಪರೀಕ್ಷೆ ವೇಳೆ ತಾಂತ್ರಿಕ ತೊಂದರೆ ಕಂಡುಬಂದಿದ್ದರಿಂದ ಔಪಚಾರಿಕವಾಗಿ ಬೆಳಗಿನ ಜಾವ ಧ್ವಜಾರೋಹಣ ಮಾಡಲಾಗಿದೆ.
ಇದನ್ನೂ ಓದಿ | Independence day| ಕಂಠೀರವದಲ್ಲಿ ಬಿಜೆಪಿ ಠೇಂಕಾರ, ಕಾಂಗ್ರೆಸ್‌ನ ಭ್ರಮೆ ಕಳಚಿ ಗೆದ್ದು ಬರುತ್ತೇವೆ ಎಂದ ಬಿಎಸ್‌ವೈ
ಜಿದ್ದಿಗೆ ಬಿದ್ದು ಗೆದ್ದ ಜಿಲ್ಲಾ ಉಸ್ತುವಾರಿ ಸಚಿವ
ಅಂದುಕೊಂಡಂತೆ ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜ ಸ್ಥಂಭ ನಿರ್ಮಾಣವಾಗಿದೆ. ಅದೇ ರೀತಿ ಧ್ವಜ ಸ್ಥಂಭದಲ್ಲಿ 120×80 ಅಡಿ ಗಾತ್ರದ ತಿರಂಗಾ ನಿರರ್ಗಳವಾಗಿ ಬಾನಂಗಳದಲ್ಲಿ ಹಾರಾಡುತ್ತಿದೆ. ಹೊಸಪೇಟೆ ಕ್ಷೇತ್ರದ ಕನಸಿನ ಕೂಸಾಗಿದ್ದ ಬೃಹತ್ ಧ್ವಜ ಸ್ಥಂಭ ನಿರ್ಮಿಸಿ ಸ್ವಾತಂತ್ರ್ಯೋತ್ಸವ ದಿನ ಲೋಕಾರ್ಪಣೆ ಮಾಡಲಾಗಿದೆ. ವಿಜಯನಗರ ಉದಯಕ್ಕೆ ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ, ಬೃಹತ್ ಧ್ವಜ ಸ್ಥಂಭದಲ್ಲಿ ತಾವೇ ಧ್ವಜಾರೋಹಣ ಮಾಡಬೇಕು ಎಂದು ಹಠಕ್ಕೆ ಬಿದ್ದು ಧ್ವಜಾರೋಹಣ ನೆರವೆರಿಸಿದ್ದಾರೆ.
ಮೊದಲು ಪುನೀತ್ ರಾಜಕುಮಾರ್ ಸರ್ಕಲ್‌ನಲ್ಲಿರೋ 150 ಅಡಿ ಎತ್ತರದ ಧ್ವಜಸ್ಥಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಸಚಿವ ಆನಂದ್ ಸಿಂಗ್, ವಿಜಯನಗರ ಸಾಮ್ರಾಜ್ಯದ ಕಳೆ ಮತ್ತೆ ಹೊಸಪೇಟೆಯಲ್ಲಿ ಕಳೆಗಟ್ಟಿದೆ. ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ. ನೂರಾರು ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ಬಂದಿದೆ. ಜತೆಗೆ ವಿಜಯನಗರ ಜಿಲ್ಲೆ ಗಂಡು ಮೆಟ್ಟಿದ ನಾಡಾಗಿದ್ದು, ವಿಜಯನಗರದಲ್ಲಿ ಇರುವ ಪ್ರತಿಯೊಬ್ಬರು ಗಂಡುಗಲಿಗಳು ಎಂದು ಜಿಲ್ಲೆಯ ಜನರನ್ನು ಕೊಂಡಾಡಿದರು.
ತಾಂತ್ರಿಕ ದೋಷ ಒಪ್ಪಿಕೊಂಡ ಆನಂದ್ ಸಿಂಗ್
ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಆನಂದ್ ಸಿಂಗ್, ದೇಶದ ಅತಿ ಎತ್ತರದ 405 ಅಡಿ ಧ್ವಜಸ್ಥಂಬದ ಮೇಲೆ ಧ್ವಜಾರೋಹಣ ನೆರವೇರಿಸಲಾಗಿದೆ. ಧ್ವಜಸ್ಥಂಭ ಟ್ರಯಲ್ ರನ್ ವೇಳೆ ತಾಂತ್ರಿಕ ದೋಷ ಕಂಡು ಬಂದಿದ್ದು ನಿಜ. ಧ್ವಜಸ್ಥಂಬದ ಮೇಲೆ ಬೆಳಗ್ಗೆ ಒಂಬತ್ತು ಗಂಟೆಗೆ ಧ್ವಜಾರೋಹಣ ಮಾಡುವ ಪ್ಲಾನ್ ಇತ್ತು. ಟ್ರಯಲ್ ರನ್ ವೇಳೆಯೇ ಎರಡು ಮೂರು ಬಾರಿ ಧ್ವಜಕ್ಕೆ ಕಟ್ಟಿದ ತಂತಿ ಮಾದರಿಯ ಹಗ್ಗ ತುಂಡಾಯಿತು. ಕೊನೆಗೆ ಬೆಳಗ್ಗೆ ಐದು ಗಂಟೆಗೆ ಧ್ವಜಾರೋಹಣ ಮಾಡಿದೆವು. ಕೆಳಗಿಳಿಸಿ ಸಾರ್ವಜನಿಕವಾಗಿ ಹಾರಿಸಲು ಕಷ್ಟ ಎಂದು ಶಿಷ್ಟಾಚಾರದ ಪ್ರಕಾರ ಜಿಲ್ಲಾಡಳಿತ ನಿಯೋಜನೆ ಮಾಡಿದ ಸ್ಥಳದಲ್ಲಿ ಧ್ವಜಾರೋಹಣ ಮಾಡಲಾಯಿತು ಎಂದರು.
ಸಂಜೆ ಸಂಗೀತ ಕಾರ್ಯಕ್ರಮ
ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸುಮಾರು 18 ತಂಡಗಳು ಕವಾಯಿತಿನಲ್ಲಿ ಭಾಗಿಯಾಗಿದ್ದವು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ಸಂಜೆ ಪ್ರೇಕ್ಷಕರಿಗೆ ಸಂಗೀತ ರಸದೌತನ ಇರಲಿದ್ದು, ರಾತ್ರಿಯಿಡಿ ಹೊಸಪೇಟೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ.
ಇದನ್ನೂ ಓದಿ | Independence Day | ಕೆಂಪು ಕೋಟೆ ಭಾಷಣದಲ್ಲಿ ಕಾಮನ್ವೆಲ್ತ್ ಸಾಧಕರನ್ನು ಹೊಗಳಿದ ಪ್ರಧಾನಿ ಮೋದಿ