ಚಾಮರಾಜನಗರ: ಉಚಿತ ಪ್ರಯಾಣ ಸೌಲಭ್ಯದ (Free Bus Service) ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ದಂಡೇ ಹರಿದುಹೋಗುತ್ತಿದೆ. ಈ ನಡುವೆ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯರು ಬಾಗಿಲನ್ನೇ ಮುರಿದಿದ್ದಾರೆ. ಇದರಿಂದ ದಿಕ್ಕು ತೋಚದೆ ಬಸ್ ಕಂಡಕ್ಟರ್ ಪೆಚ್ಚು ಮೊರೆ ಹಾಕಿ ನಿಂತ ಪ್ರಸಂಗ ಕಂಡುಬಂತು.
ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶನಿವಾರ, ಮಹದೇಶ್ವರ ಬೆಟ್ಟದತ್ತ ಸಾವಿರಾರು ಮಹಿಳೆಯರು ತೆರಳುತ್ತಿದ್ದರು. ಸಿಕ್ಕಿದ ಬಸ್ಗೆ ನಾ ಮುಂದು ತಾ ಮುಂದು ಎಂದು ಹತ್ತುತ್ತಿದ್ದರು. ಈ ವೇಳೆ ಒಂದು ಬಸ್ಗೆ ಹತ್ತುವಾಗ ನೂಕು ನುಗ್ಗಲು ಉಂಟಾಗಿ ಮಹಿಳೆಯರು ಬಸ್ ಬಾಗಿಲನ್ನೇ ಮುರಿದು ಹಾಕಿದ್ದಾರೆ.