Site icon Vistara News

Theerthahalli News: ಮಾಡಾಳು ವಿರೂಪಾಕ್ಷಪ್ಪ ಪ್ರಕರಣ; ಗೃಹ ಸಚಿವ ಆರಗ, ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ: ಕಿಮ್ಮನೆ ರತ್ನಾಕರ್

Kimmane Ratnakar Theerthahalli

#image_title

ತೀರ್ಥಹಳ್ಳಿ: ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ ಇಡೀ ರಾಜ್ಯ ಸರ್ಕಾರವೇ ಅವರನ್ನು ರಕ್ಷಿಸಿಲು ಪ್ರಯತ್ನ ಪಟ್ಟಿದೆ. ಇಲ್ಲದಿದ್ದರೆ ಎಂಟು ಕೋಟಿಗೂ ಹೆಚ್ಚು ಹಣ ಅವರ ಮನೆಯಲ್ಲಿ ಸಿಕ್ಕರೂ ಏಕೆ ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತ ಪೊಲೀಸ್ ಈ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಂಡಿಲ್ಲ. ಇದರ ಸಂಪೂರ್ಣ ಹೊಣೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೊರಬೇಕು. ಅವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಗ್ರಹಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರಗ ಜ್ಞಾನೇಂದ್ರ ಅತ್ಯಂತ ವಿಫಲ ಗೃಹ ಮಂತ್ರಿ. ಆರು ದಿನ ತಲೆ ತಪ್ಪಿಸಿಕೊಂಡಿದ್ದ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ ಹತ್ತು ನಿಮಿಷದಲ್ಲಿ ಹೊರ ಬಂದು ಸಾವಿರಾರು ಜನರೆದುರು ಮೆರವಣಿಗೆ ಮಾಡುತ್ತಾರೆ ಎಂದರೆ ಅವರು ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಇದ್ದರು ಎಂದೇ ಅರ್ಥ. ಹಾಗಾದರೆ ಪೊಲೀಸರ ಹಲವಾರು ತಂಡ ಮಾಡಿ ಅವರನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದು ಸುಳ್ಳು. ಈ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಮತ್ತು ಪ್ರಕರಣದ ತನಿಖಾ ಅಧಿಕಾರಿ ವಿರುದ್ಧವೇ ತನಿಖೆ ಆಗಬೇಕು. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲ ಕೋಮು ಗಲಭೆಗಳನ್ನು ಮುನ್ನಡೆಸಿದ್ದೇ ಆರಗ ಜ್ಞಾನೇಂದ್ರ” ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: International Women’s Day: ಕೊರೊನಾ ಕಾಲದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು ಹೋರಾಡಿದ ಮಹಿಳೆಯರು

ರಾಜ್ಯ ಕೆಪಿಸಿಸಿ ಸಹಕಾರ ಸಂಚಾಲಕ ಆರ್.ಎಂ. ಮಂಜುನಾಥ್ ಗೌಡ ಮಾತನಾಡಿ, “ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕಿದ ಮೊತ್ತದ ಹಣ ದೇಶದಲ್ಲಿ ಎಲ್ಲೂ ಸಿಕ್ಕಿಲ್ಲ. ಈ ಪ್ರಕರಣ ಇಡಿ ತನಿಖೆ ಮಾಡಲು ಸೂಕ್ತವಾಗಿದೆ. ಕೇವಲ ಇಪ್ಪತ್ತು ಲಕ್ಷ ಸಿಕ್ಕ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಹಣ ಸಿಕ್ಕ ತಕ್ಷಣವೇ ಅವರನ್ನು ಬಚಾವ್ ಮಾಡಲು ಅನುಕೂಲ ಆಗುವಂತೆ ಎಫ್ಐಆರ್ ಹಾಕಲಾಗುತ್ತದೆ. ಇದು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದಕ್ಕೆ ಸಾಕ್ಷಿ” ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆಸ್ತೂರು ಮಂಜುನಾಥ್, ಟಿ.ಎಲ್. ಸುಂದರೇಶ್, ಡಿ.ಎಸ್. ವಿಶ್ವನಾಥ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಹಮತ್ ಉಲ್ಲಾ ಅಸಾದಿ, ಯಲ್ಲಪ್ಪ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: International womens day-2023: ಮಹಿಳೆಯರನ್ನು ಪುರುಷರೂ ಅರ್ಥ ಮಾಡಿಕೊಳ್ಳಬೇಕು ಎಂದ ಸಿಎಂ ಬೊಮ್ಮಾಯಿ

Exit mobile version