ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರ ಸಮೀಪದ ಹೊರಬೈಲಿನ ಸ್ಮಶಾನದಲ್ಲಿ ಸುಡಲಾಗಿದ್ದ ಶವದ ಬೂದಿಯನ್ನು (ಚಿತಾಭಸ್ಮ) ಹಾಗೂ ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್ ಅನ್ನು ಸಹ ದುಷ್ಕರ್ಮಿಗಳು ಕದ್ದೊಯ್ದ ವಿಚಿತ್ರ ಪ್ರಕರಣವೊಂದು ಬುಧವಾರ (ಫೆ.೧) ಬೆಳಕಿಗೆ ಬಂದಿದೆ.
ಪಟ್ಟಣದ ಸಮೀಪವಿರುವ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ 3 ದಿನದ ಹಿಂದೆ ಮೃತಪಟ್ಟಿದ್ದ ಊರಿನ ಮಹಿಳೆಯೊಬ್ಬರ ಶವ ಸಂಸ್ಕಾರ ಮಾಡಲಾಗಿತ್ತು. ಮಾರನೇ ದಿನ ಕುಟುಂಬದವರು ಸ್ಮಶಾನದಲ್ಲಿ ಅಳಿದುಳಿದ ಕಟ್ಟಿಗೆ ಕೊಳ್ಳಿಯನ್ನು ದೂಡುವ ಪದ್ಧತಿಯಂತೆ ಕಟ್ಟಿಗೆಯನ್ನು ಮುಂದೆ ಹಾಕಿ ಒಂದು ಎಳನೀರು ಇಟ್ಟು ವಾಪಸ್ ಬಂದಿದ್ದರು. ಮೂರನೇ ದಿನವಾದ ಬುಧವಾರ (ಫೆ.೧) ಸಂಸ್ಕಾರ ಮಾಡಿದ ಚಿತಾಭಸ್ಮ ತೆಗೆಯಲು ಕುಟುಂಬಸ್ಥರು ಸ್ಮಶಾನಕ್ಕೆ ಬಂದಿದ್ದರು. ಆದರೆ, ಸ್ಮಶಾನದಲ್ಲಿ ನೋಡುವಾಗ ಚಿತಾಭಸ್ಮ ಮಾಯವಾಗಿತ್ತು. ಆಶ್ಚರ್ಯವೆಂದರೆ ಚಿತಾಭಸ್ಮ ಕದ್ದ ಕಳ್ಳರು ಮೂರು ಎಲುಬು ಮೂಳೆಯನ್ನು ಅಲ್ಲೇ ಒಂದು ಬದಿಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಕುಟುಂಬದವರು ಆ ಮೂರು ಮೂಳೆಗಳನ್ನು ತಂದು ಮುಂದಿನ ಕಾರ್ಯವನ್ನು ಮಾಡಿದ್ದಾರೆ.
ಇದನ್ನೂ ಓದಿ | IND VS NZ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಚಿತಾಭಸ್ಮ ಇಲ್ಲದ್ದನ್ನು ನೋಡಿ ಕಂಗಾಲಾದ ಕುಟುಂಬಸ್ಥರು ಆಶ್ಚರ್ಯಚಕಿತರಾಗಿ ಊರಿನ ಗ್ರಾಮಸ್ಥರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಸ್ಮಶಾನಕ್ಕೆ ಹೋಗಿ ನೋಡಿದಾಗ ಕುಟುಂಬಸ್ಥರು ಹೇಳಿದ ವಿಷಯ ಸತ್ಯವಾಗಿತ್ತು. ಶವ ಸಂಸ್ಕಾರ ಮಾಡುವಾಗ ಅದರಲ್ಲಿ ಬಂಗಾರ, ಬೆಳ್ಳಿ ಹಾಗೂ ನಾಣ್ಯಗಳನ್ನು ಹಾಕಿರಬಹುದೆಂದು ಯೋಚಿಸಿ ಕಳ್ಳರು ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿರಬಹುದು ಎಂದು ಸಾರ್ವಜನಿಕರು ಶಂಕಿಸಿದ್ದಾರೆ..