Site icon Vistara News

karnataka budget 2023 : ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್​ನಲ್ಲಿ ಹಲವು ಯೋಜನೆ

metro

#image_title

ಬೆಂಗಳೂರು: ಶರ ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸುಗಮ ಸಂಚಾರ, ರಸ್ತೆ, ರಾಜಕಾಲುವೆಗಳ ಅಭಿವೃದ್ಧಿಯ ಮೂಲಕ ಪ್ರವಾಹ ತಡೆಗಟ್ಟುವುದು, ವೈಜ್ಞಾನಿಕ ಹಾಗೂ ದಕ್ಷ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗಾಗಿ ಹಲವು ಯೋಜನೆಗಳನ್ನು ರಾಜ್ಯ ಬಜೆಟ್​ನಲ್ಲಿ (karnataka budget 2023) ಘೋಷಿಸಲಾಗಿದೆ.

ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6,000 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಕಟಿಸಲಾಗಿದೆ. ಹೈಡೆನ್ಸಿಟಿ ಕಾರಿಡಾರ್‌ ಯೋಜನೆಯಡಿಯಲ್ಲಿ ಒಟ್ಟು 108 ಕಿ.ಮೀ. ರಸ್ತೆಗಳನ್ನು 273 ಕೋಟಿ ರೂಪಾಯಿ ಯೋಜನಾ ವೆಚ್ಚದಡಿ ತೆಗೆದುಕೊಳ್ಳಲಾಗಿದೆ. ಪ್ರವಾಹ ತಡೆಗೆ 195 ಕಿ.ಮೀ. ಉದ್ದದ ಚರಂಡಿ ಮತ್ತು ಕಲ್ವರ್ಟ್‌ಗಳ ಅಭಿವೃದ್ಧಿಗಾಗಿ 1,813 ಕೋಟಿ ರೂ. ಗಳನ್ನು ಬಜೆಟ್​ನಲ್ಲಿ ಒದಗಿಸಲಾಗಿದೆ.

ಟ್ರಾಫಿಕ್ ನಿರ್ವಹಣೆ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು, ಪ್ರಮುಖ 75 ಜಂಕ್ಷನ್‌ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. Artificial Intelligence ನ ಬಳಕೆಯೊಂದಿಗೆ ಟ್ರಾಫಿಕ್‌ ಸಿಗ್ನಲ್‌ಗಳ ನಿರ್ವಹಣೆ ಮಾಡುವ ಯೋಜನೆ ಪ್ರಕಟಿಸಲಾಗಿದೆ.

ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿ ವರೆಗೆ 350 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ. ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿ, ಯಶವಂತಪುರ ರೈಲು ನಿಲ್ದಾಣದಿಂದ ಮತ್ತಿಕೆರೆ ಹಾಗೂ ಬಿಇಎಲ್ ರಸ್ತೆಯ ವರೆಗೆ ಇಂಟಿಗ್ರೆಟೆಡ್​ ಮೇಲುರಸ್ತೆ ನಿರ್ಮಿಸಿ ನೇರ ಸಂಪರ್ಕ ಒದಗಿಸುವ ಯೋಜನೆ ಪ್ರಕಟಿಸಲಾಗಿದೆ.

1,00೦ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ 120 ಕಿ.ಮೀ. ಆರ್ಟೀರಿಯಲ್ ರಸ್ತೆಯ ವೈಟ್ ಟಾಪಿಂಗ್ ಹಾಗೂ ನಗರದ 300 ಕಿ.ಮೀ. ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳು 450 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿವೆ. ಇದೇ ವೇಳೆ ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳ ರಸ್ತೆಗಳ ದುರಸ್ತಿಗೂ 300 ಕೋಟಿ ರೂ. ಮೀಸಲಿಡಲಾಗಿದೆ.

ಮೆಟ್ರೋ ಯೋಜನೆ ಬಳಕೆ

ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ಟರ್ಮಿನಲ್‌ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು 300 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 30 ನಿಲ್ದಾಣಗಳೊಂದಿಗೆ, 58.19 ಕಿ.ಮೀ.ಗಳ ಮೆಟ್ರೋ ರೈಲು ಯೋಜನೆಯ ಕಾಮಗಾರಿಗಳು ವೇಗದಲ್ಲಿ ಪ್ರಗತಿಯಲ್ಲಿವೆ.

ಇದನ್ನೂ ಓದಿ: Karnataka Budget 2023: ಬಸವರಾಜ ಬೊಮ್ಮಾಯಿ ಬಜೆಟ್‌ ಭಾಷಣದಲ್ಲಿ ಕುವೆಂಪು, ಡಿವಿಜಿ, ಕೆಎಸ್‌ನ, ಜಿಎಸ್‌ಎಸ್‌ ಕವಿತೆಗಳು

ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸಲು 13,139 ಕೋಟಿ ರೂ. ವೆಚ್ಚದಲ್ಲಿ 288 ಕಿ.ಮೀ. ಉದ್ದದ Satellite Town Ring Road ಅನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಈ ಯೋಜನೆಗೆ ಭೂಸ್ವಾಧೀನದ ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲು ಒಪ್ಪಿಗೆ ದೊರಕಿದೆ.

Exit mobile version