ನವದೆಹಲಿ: ಇಂದು 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ದೇಶವನ್ನು ಉದ್ದೇಶಿಸಿ ಮಾತನಾಡಿದರು. ಭಾಷಣ ಪ್ರಾರಂಭ ಮಾಡುತ್ತಿದ್ದಂತೆ ಅವರು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಉಚ್ಚರಿಸಿ, ಅವರಿಗೆಲ್ಲ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಹೀಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವಾಗ ಪ್ರಧಾನಿ ಮೋದಿ, ಜವಾಹರ್ ಲಾಲ್ ನೆಹರೂ ಹೆಸರನ್ನೂ ಉಲ್ಲೇಖಿಸಿದ್ದು, ಸದ್ಯದ ಮಟ್ಟಿಗೆ ತುಂಬ ವಿಶೇಷವಾಗಿದೆ ಮತ್ತು ಕರ್ನಾಟಕ ಬಿಜೆಪಿ ನಾಯಕರಿಗೆ ಪರೋಕ್ಷವಾಗಿಯೇ ತುಸು ಬಿಸಿ ಮುಟ್ಟಿಸಿದಂತೆ ಆಗಿದೆ.
ಪ್ರಧಾನಿ ಮೋದಿ ಹೇಳಿದ್ದೇನು?
ಸ್ವತಂತ್ರ ಭಾರತದ ಕನಸು ಕಂಡು, ಅದನ್ನು ನೆರವೇರಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್ರಂಥ ಮಹನೀಯರಿಗೆ ಇಡೀ ದೇಶ ಸದಾ ಋಣಿಯಾಗಿರಬೇಕು. ಈ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಮಹಿಳಾ ಶಕ್ತಿಗಳಾಗಿದ್ದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ರಾಣಿ ಚೆನ್ನಮ್ಮ, ಬೇಗಮ್ ಹಜ್ರತ್ ಮಹಲ್ ಮತ್ತಿತರರು ಪಾಲ್ಗೊಂಡಿದ್ದು ಹೆಮ್ಮೆ. ಬ್ರಿಟಿಷರ ಕೈಯಲ್ಲಿದ್ದ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅದಕ್ಕೊಂದು ರೂಪ ಕೊಟ್ಟ ಡಾ. ರಾಜೇಂದ್ರ ಪ್ರಸಾದ್, ನೆಹರೂ ಜಿ, ಸರ್ದಾರ್ ವಲಭಬಾಯಿ ಪಟೇಲ್, ಎಸ್.ಪಿ. ಮುಖರ್ಜಿ, ಎಲ್.ಬಿ. ಶಾಸ್ತ್ರಿ, ಜೆ.ಪಿ. ನಾರಾಯಣ್, ದೀನ್ ದಯಾಳ್ ಉಪಾಧ್ಯಾಯ, ಆರ್.ಎಂ. ಲೋಹಿಯಾ, ವಿನೋಭಾ ಭಾವೆ ಸೇರಿ ಎಲ್ಲ ನಾಯಕರೂ ಸದಾ ಸ್ಮರಣೀಯರು ಎಂದು ಪ್ರಧಾನಿ ಇಂದು ಭಾಷಣದಲ್ಲಿ ಹೇಳಿದರು. ಅಷ್ಟೇ ಅಲ್ಲ ಅವರು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ಎನ್ನಿಸಿಕೊಂಡಿದ್ದ, ತಾತ್ಯಾ ಟೋಪೆ, ಭಗತ್ ಸಿಂಗ್, ಮಂಗಲ್, ಪಾಂಡೆ, ಸುಖ್ದೇವ್, ಚಂದ್ರಶೇಖರ್ ಆಜಾದ್, ರಾಜ್ಗುರು ಮತ್ತಿತರರಿಗೂ ಗೌರವ ಸಲ್ಲಿಸಿದರು.
ಕರ್ನಾಟಕ ಬಿಜೆಪಿ ಎಡವಿತಾ?
ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಜವಾಹರ್ ಲಾಲ್ ನೆಹರೂ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಿಂದ ಮಾಧ್ಯಮಗಳಿಗೆ ಒಂದು ಜಾಹೀರಾತು ಕೊಡಲಾಗಿತ್ತು. ಅದರಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನಮಗೆ ಸ್ಫೂರ್ತಿಯಾಗಲಿ, ಅವರ ದೇಶಪ್ರೇಮದ ಹಾದಿಯಲ್ಲಿ ಹೆಜ್ಜೆಹಾಕೋಣ’ ಎಂದು ದೊಡ್ಡ ಸಾಲುಗಳನ್ನು ಬರೆದು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಮುದ್ರಿಸಲಾಗಿದೆ. ಆದರೆ ಅಷ್ಟು ದೊಡ್ಡ ಜಾಹೀರಾತಿನಲ್ಲಿ ಎಲ್ಲಿಯೂ ಜವಾಹರ್ ಲಾಲ್ ನೆಹರೂ ಫೋಟೋ ಇರಲಿಲ್ಲ. ಅಂದರೆ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಬಿಜೆಪಿ ಸೇರಿಸಿರಲಿಲ್ಲ.
ಈ ಜಾಹೀರಾತು ನೋಡುತ್ತಿದ್ದಂತೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ‘ನಿಮ್ಮದೆಂಥಾ ಕ್ಷುಲ್ಲಕ, ದ್ವೇಷದ ರಾಜಕಾರಣ’ ಎಂದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ, ಬಿಜೆಪಿ ಮಂತ್ರಿಗಳು, ಶಾಸಕರೆಲ್ಲ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದರು. ಆಗಸ್ಟ್ 14ರಂದು ಈ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ನಾವು ಜವಾಹರ್ ಲಾಲ್ ನೆಹರೂಗೆ ಎಲ್ಲಿಯೂ ಅವಮಾನ ಮಾಡಿಲ್ಲ. ಬೇಧ-ಭಾವವನ್ನೂ ಮಾಡಿಲ್ಲ, ಕಾಂಗ್ರೆಸ್‌ನ ದಾದಾಬಾಯಿ ನವರೋಜಿ, ಹರ್ಡೇಕರ್ ಮಂಜಪ್ಪ ಅವರನ್ನು ಸ್ಮರಿಸಿದ್ದೇವಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ನೆಹರೂ ಅವರನ್ನೆಂದಿಗೂ ಯಾರೂ ಮರೆತಿಲ್ಲ. ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದೇವೆ, ಇನ್ನೂ ಕೆಲವು ಸ್ವರೂಪದಲ್ಲಿ ಅವರನ್ನು ನೆನಪಿಸಿಕೊಂಡಿದ್ದೇವೆ. ಜಾಹೀರಾತಿನ ಚಿತ್ರದಲ್ಲಿ ನೆಹರು ಇದ್ದಾರೆ. ಕಾಂಗ್ರೆಸ್ಸಿಗರು ಗಾಬರಿ ಪಡುವ ಅವಶ್ಯಕತೆ ಇಲ್ಲ’ ಎಂದಿದ್ದರು.
ಕರ್ನಾಟಕದಲ್ಲಾದ ನೆಹರೂ ಚಿತ್ರ ವಿವಾದ ಪ್ರಧಾನಿ ಮೋದಿ ಕಿವಿಗೆ ತಲುಪಿರಬಹುದಾ?- ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೆ ಇದ್ದರೂ ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ರಾಜಕೀಯ ಬೇಡವೆಂಬ ಸಂದೇಶವನ್ನು ಇಂದು ಪ್ರಧಾನಿ ಮೋದಿ ಸ್ಪಷ್ಟವಾಗಿಯೇ ಕೊಟ್ಟಂತಿದೆ. ಕರ್ನಾಟಕದಲ್ಲಿ ಜಾಹೀರಾತಿನಲ್ಲಿ ಬಿಜೆಪಿ ಸರ್ಕಾರ ನೆಹರೂ ಫೋಟೋ ಹಾಕಿಲ್ಲವೆಂಬ ವಿವಾದ ಎದ್ದ ಬೆನ್ನಲ್ಲೇ, ಅಲ್ಲಿ ದೆಹಲಿ ಕೆಂಪು ಕೋಟೆ ಮೇಲೆ ನಿಂತು ಪ್ರಧಾನಿ ಮೋದಿ ನೆಹರೂರನ್ನು ಸ್ಮರಿಸಿದ್ದು ವಿಶೇಷವೇ ಆಗಿದೆ.
ಇದನ್ನೂ ಓದಿ: ಸರ್ಕಾರಿ ಜಾಹೀರಾತಿನಲ್ಲಿ ನೆಹರು ನಾಪತ್ತೆ: ಕಾಂಗ್ರೆಸ್ ನಾಯಕರ ಆಕ್ರೋಶ; ಬಿಜೆಪಿ ಸಮರ್ಥನೆ