Site icon Vistara News

Tiger Attack | ಜಮೀನಿನಲ್ಲಿದ್ದ ರೈತನ ಮೇಲೆ ಹುಲಿ ದಾಳಿ; ಕೂದಲೆಳೆ ಅಂತರದಲ್ಲಿ ಪಾರು

Tiger attack ಗುಂಡ್ಲುಪೇಟೆಯಲ್ಲಿ ರೈತನ ಮೇಲೆ ಹುಲಿ ದಾಳಿ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಲವು ಕಡೆ ಹುಲಿಗಳ ದಾಳಿ (Tiger Attack) ಹೆಚ್ಚಾಗಿದ್ದು, ಜಾನುವಾರುಗಳನ್ನು ಬಲಿ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಭಾನುವಾರ (ಡಿ. ೪) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮವು ಬಂಡೀಪುರ ಕಾಡಂಚಿನಲ್ಲಿ ಇರುವುದರಿಂದ ಜನತೆಗೆ ಜೀವ ಭಯ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಚೌಡಹಳ್ಳಿ ಗ್ರಾಮದ ನಾಗರಾಜ್ ಎಂಬುವವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಹುಲಿ ಬಂದಿದೆ. ಅವರ ಮೇಲೆ ಎರಗಲು ಮುಂದಾಗಿದೆ. ತಕ್ಷಣವೇ ಅವರು ಪಕ್ಕಕ್ಕೆ ಸರಿದಿದ್ದಾರೆ. ಅಲ್ಲದೆ, ಜೋರಾಗಿ ಕಿರುಚಿಕೊಂಡಿದ್ದಾರೆ. ಇದೇ ವೇಳೆ ಅಕ್ಕಪಕ್ಕದ ಹೊಲ ಸೇರಿದಂತೆ ಸುತ್ತಮುತ್ತಲು ಇದ್ದ ಜನರೂ ಸಹ ಕೂಗಿಕೊಂಡಿದ್ದಾರೆ. ಕೈಗೆ ಸಿಕ್ಕ ಕಲ್ಲು ಸೇರಿ ಆಯುಧಗಳನ್ನು ಹಿಡಿದುಕೊಂಡಿದ್ದಾರೆ. ಅಷ್ಟೆಲ್ಲ ಜನ ಒಂದೇ ಬಾರಿಗೆ ಕೂಗಿದ್ದರಿಂದ ಗಾಬರಿಗೊಂಡ ಹುಲಿಯು ಅಲ್ಲಿಂದ ಕಾಲ್ಕಿತ್ತಿದೆ.

ಇದನ್ನೂ ಓದಿ | Hanuman sankirtan yatra | ಜಾಮಿಯಾ ಮಸೀದಿ ಜಾಗ ನಮ್ಮದು ಎಂದು ನುಗ್ಗಲು ಮಾಲಾಧಾರಿಗಳ ಯತ್ನ; ಶ್ರೀರಂಗಪಟ್ಟಣ ಉದ್ವಿಗ್ನ

ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ
ಜನರೂ ಸಹ ಹೊಲದಿಂದ ಓಡಿ ಬಂದು ಮನೆ ಸೇರಿಕೊಂಡಿದ್ದಾರೆ. ಅಲ್ಲದೆ, ಈಚೆಗೆ ಹುಲಿಗಳು ಶೀಲವಂತಪುರ, ಕೊಡಸೋಗೆ, ದೇಪಲಾಪುರ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ ಎಂಬ ಅಂಶ ಗೊತ್ತಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ.

೨ ವರ್ಷದ ಹಿಂದೆ ಇದೇ ಜಾಗದಲ್ಲಿ ಇಬ್ಬರ ಬಲಿ
ಕೆಲವು ತಿಂಗಳ ಹಿಂದೆ ಇದೇ ಜಮೀನಿನಲ್ಲಿ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಇದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ, ಅವರು ನಿರ್ಲಕ್ಷ್ಯ ಮಾಡಿದ್ದಾರೆಂದು ಜನ ದೂರಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಇಬ್ಬರು ರೈತರನ್ನು ಹುಲಿಯೊಂದು ಬಲಿ ಪಡೆದಿತ್ತು. ಈಗ ಮತ್ತೆ ಹುಲಿ ನರಬಲಿಗೆ ಮುಂದಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಸಬೂಬು
ಈ ಬಗ್ಗೆ ಅರಣ್ಯ ಇಲಾಖೆಯನ್ನು ಪ್ರಶ್ನೆ ಮಾಡಿದರೆ ಹುಲಿಯನ್ನು ಓಡಿಸಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಜನರು ಆಕ್ರೋಶವನ್ನು ಹೊರಹಾಕಿದ್ದಾರೆ. ಮೃತ ಜಾನುವಾರುಗಳಿಗೆ ಪರಿಹಾರ ನೀಡುವುದಷ್ಟೇ ಅರಣ್ಯ ಇಲಾಖೆಯ ಕೆಲಸವಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | Drowning in water | ಗೋಕರ್ಣ ತದಡಿ ಬೀಚ್‌ನಲ್ಲಿ ಈಜಲು ಹೋಗಿ ಮುಳುಗಿದ ತಾಯಿ-ಮಗ ಅಸ್ವಸ್ಥ

Exit mobile version