ಚಾಮರಾಜನಗರ: ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಪ್ರಾಣಿಗಳು, ಸಾಕು ಪ್ರಾಣಿಗಳು ಹಾಗೂ ಜನರ ಮೇಲೆ ದಾಳಿ ಮಾಡುತ್ತಿದೆ. ಬಂಡೀಪುರ ವ್ಯಾಪ್ತಿಯ ಹಾಡಿನಕಣಿವೆ ಬಳಿ ಹುಲಿ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾರೆ. ಬಸವ (50) ಹುಲಿ ದಾಳಿಗೆ ಬಲಿಯಾದವರು.
ಬುಡಕಟ್ಟು ಜೇನುಕುರುಬ ಸಮುದಾಯಕ್ಕೆ ಸೇರಿದ ಬಸಪ್ಪನ ಮೇಲೆ ಹುಲಿ ದಾಳಿ ನಡೆಸಿದೆ. ಬಳಿಕ ಕಾಡಂಚಿಗೆ ಎಳೆದೊಯ್ದು ತಿಂದು ಹಾಕಿದೆ. ನಿನ್ನೆ ಸೋಮವಾರ ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಸಪ್ಪನ ಮೇಲೆ ದಾಳಿ ನಡೆಸಿ, ಬಳಿಕ ದೇಹವನ್ನು ಅರ್ಧಂಬರ್ಧ ತಿಂದು ಹಾಕಿದೆ. ಬಂಡೀಪುರ ಮಂಗಲ ಮಧ್ಯೆ ಕಾಡಿನಲ್ಲಿ ಪೋಡು ಈ ಹಾಡಿನಕಣಿವೆ ಗ್ರಾಮವಿದ್ದು, ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮೈಸೂರಲ್ಲೂ ಹುಲಿ ದಾಳಿ
ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ- ಮಾನವ ಸಂಘರ್ಷ ಮುಂದುವರಿದಿದೆ. ಮೈಸೂರಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿಯಾಗಿತ್ತು. ನಂಜನಗೂಡು ತಾಲೂಕಿನಲ್ಲಿ ತಿಂಗಳ ಅಂತರದಲ್ಲಿ ಮೂರನೇ ದಾಳಿ ನಡೆದಿತ್ತು, ಹುಲಿ ದಾಳಿಗೆ (Tiger Attack) ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ (55) ಮೃತಪಟ್ಟಿದ್ದರು.
ರತ್ನಮ್ಮ ದನ ಮೇಯಿಸಲು ಕಾಡಂಚಿಗೆ ತೆರಳಿದ್ದರು. ಮಧ್ಯಾಹ್ನದ ಹೊತ್ತಿಗೆ ಬಂದ ಹುಲಿ ಎರಗಿ ದಾಳಿ ಮಾಡಿತ್ತು. ಮಹಿಳೆಯ ಎಡಭಾಗದ ದೇಹವನ್ನೇ ತಿಂದು ಹಾಕಿತ್ತು. ಅಂತರಸಂತೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು.
ಹೊಲದಲ್ಲಿದ್ದ ವ್ಯಕ್ತಿಯನ್ನು ಎಳೆದೋಗಿ ಕೊಂದಿತ್ತು!
ನವೆಂಬರ್ 6ರಂದು ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ಹುಲಿ ದಾಳಿಗೆ (Tiger Attack) ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ ಹುಲಿ ದಾಳಿ ಮಾಡಿ ವ್ಯಕ್ತಿಯನ್ನು ಕೊಂದಿತ್ತು. ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ(45) ಮೃತಪಟ್ಟಿದ್ದರು. ಟೀ ಕುಡಿದು ಶುಂಠಿ ಹೊಲಕ್ಕೆ ಬಾಲಾಜಿ ನಾಯ್ಕ ತೆರಳಿದ್ದರು. ಈ ವೇಳೆ ಏಕಾಏಕಿ ಹುಲಿ ದಾಳಿ ಮಾಡಿ ಎಳೆದು ಹೋಗಿತ್ತು. ಈ ವೇಳೆ ಸ್ಥಳೀಯರು ಗಮನಿಸಿ, ಕೂಗಾಡಿದ್ದರು. ನಂತರ ಹುಲಿ ಅಲ್ಲಿಂದ ಪರಾರಿಯಾಗಿತ್ತು.
ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದ ದನಗಾಹಿ ಮೇಲೆ ಹುಲಿ ದಾಳಿ ಮಾಡಿತ್ತು. ಹೀಗಾಗಿ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಹುಲಿ ಕಾರ್ಯಾಚರಣೆಗೆ ಪಾರ್ಥ ಸಾರಥಿ ಹಾಗೂ ಧರ್ಮ ಆನೆ ಎಂಟ್ರಿ ನೀಡಿತ್ತು. 30ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಹುಲಿ ಸುಳಿವು ಮಾತ್ರ ಸಿಕ್ಕಿಲ್ಲ. ಅಧಿಕಾರಿಗಳ ಕಣ್ತಿಪ್ಪಿ ಹುಲಿ ದಾಳಿಯನ್ನು ಮುಂದುವರಿಸಿದೆ. ಕಳದೆ ವರ್ಷವು ಹಾದನೂರು ಒಡೆಯನಪುರದ ಮಹದೇವೇಗೌಡ ಎಂಬ ರೈತನನ್ನು ಹುಲಿ ಬಲಿ ಪಡೆದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ