ಚಿಕ್ಕಬಳ್ಳಾಪುರ: ಮಾದಕ ವಸ್ತುಗಳ ಮಾರಾಟ ಜಾಲದ ಹಿಂದೆ ಬಿದ್ದಿರುವ ಪೊಲೀಸರಿಗೆ ದಾಳಿ ವೇಳೆ ಹುಲಿ ಉಗುರು (Tiger Nail) ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಸೂಲದೇನಹಳ್ಳಿಯಲ್ಲಿ ಯುವಕನೊಬ್ಬ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ಚಿಂತಾಮಣಿ ಗ್ರಾಮಾಂತರ ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ ಹುಲಿ ಉಗುರು ಮಾದರಿಯ ವಸ್ತುಗಳು ಪತ್ತೆಯಾಗಿವೆ.
ನವೀನ್ ಎಂಬಾತ ಮನೆಯಲ್ಲಿ ಹುಲಿ ಉಗುರು ಪತ್ತೆಯಾಗಿದೆ. ಹುಲಿ ಉಗುರಿನ ಮಾದರಿಯನ್ನು ಪೊಲೀಸರು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ದಾಳಿ ವಿಚಾರ ತಿಳಿಯುತ್ತಿದ್ದಂತೆ ನವೀನ್ ನಾಪತ್ತೆಯಾಗಿದ್ದಾನೆ. ಪೊಲೀಸರು ನವೀನ್‌ಗಾಗಿ ಹುಡುಕಾಟವನ್ನು ನಡೆಸಿದ್ದಾರೆ. ಗಾಂಜಾ ಮಾರಾಟ ಮಾತ್ರವಲ್ಲದೆ ವನ್ಯಜೀವಿಗಳ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಿದ್ದನಾ ಎಂಬುದರ ಕುರಿತು ತನಿಖೆಯನ್ನು ನಡೆಸಿದ್ದಾರೆ.
ಬಾಬಾ ಬುಡನ್‌ಗಿರಿ ದರ್ಗಾದ ಶಾಖಾದ್ರಿ ಮನೆಗೆ ನೋಟಿಸ್; ಚಿರತೆ, ಜಿಂಕೆ ಚರ್ಮದ ಮಾಹಿತಿ ಕೇಳಿದ ಅರಣ್ಯ ಇಲಾಖೆ
ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರಿನ (Tiger Nail) ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆ (Forest department) ಕ್ರಮ ಕೈಗೊಳ್ಳುತ್ತಿದ್ದಂತೆ ಇತರ ಪ್ರಾಣಿ ಉತ್ಪನ್ನಗಳ ಬಗ್ಗೆಯೂ ದೂರುಗಳ ಮಹಾಪೂರವೇ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ಹಾಗೂ ಕ್ರಮಗಳನ್ನು ಕೈಗೊಳ್ಳುತ್ತಲಿದ್ದಾರೆ. ಈ ನಡುವೆ ಚಿಕ್ಕಮಗಳೂರಿನ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ನಿವಾಸದಲ್ಲಿ ನಿವಾಸದಲ್ಲಿ ಚಿರತೆ, ಜಿಂಕೆ ಚರ್ಮ (Leopard and deer skin) ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌಸ್ ಮೊಹಿದ್ದೀನ್ ನಿವಾಸಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ನೋಟಿಸ್ ಅಂಟಿಸಿದ್ದಾರೆ.
ಚಿರತೆ ಮತ್ತು ಚಿಂಕೆ ಚರ್ಮ ಪತ್ತೆಯಾದ ಪ್ರಕರಣ ಸಂಬಂಧ ನವೆಂಬರ್ 2ರಂದು ವಿಚಾರಣೆ ನಡೆಸಲಾಗುತ್ತಿದ್ದು, ತಪ್ಪದೆ ಹಾಜರಾಗಬೇಕು ಎಂದು ಸೂಚಿಸಿ ಶಾಖಾದ್ರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮನೆಯಲ್ಲಿ ಪತ್ತೆಯಾದ ಚಿರತೆ, ಜಿಂಕೆ ಚರ್ಮದ ಮಾಹಿತಿಯನ್ನು ದಾಖಲೆ ಸಮೇತ ನೀಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Tiger Nail: ಅರಣ್ಯಾಧಿಕಾರಿಗೂ ಹುಲಿ ಉಗುರು ಸಂಕಷ್ಟ; ಅಮಾನತಾದ ಬೆನ್ನಲ್ಲೇ ಅರೆಸ್ಟ್
ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಮೋಹನ್ ಅವರಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಆ ನೋಟಿಸ್ ಅನ್ನು ಹಿಡಿದು ಶಾಖಾದ್ರಿ ಗೌಸ್ ಮೊಹಿದ್ದೀನ್ ಮನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದಾರೆ. ಆದರೆ, ಗೌಸ್ ಮೊಹಿದ್ದೀನ್ ತಮ್ಮ ಮನೆಗೆ ಬೀಗ ಹಾಕಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆ ಬಾಗಿಲಿಗೆ ನೋಟಿಸ್ ಅನ್ನು ಅಂಟಿಸಿ ಬರಲಾಗಿದೆ.
ಶಾಖಾದ್ರಿ ಗೌಸ್ ಮೊಹಿದ್ದೀನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆ ಬಳಿ ಶಾಖಾದ್ರಿ ನಿವಾಸ ಇದ್ದು, ಅಲ್ಲಿ ಚಿರತೆ ಮತ್ತು ಜಿಂಕೆಯ ಚರ್ಮಗಳು ಪತ್ತೆಯಾಗಿದ್ದವು.
ನವಿಲು ಗರಿ ಬಳಸಬಹುದು ಎಂದಿರುವ ಈಶ್ವರ ಖಂಡ್ರೆ
ನವಿಲು ಗರಿಗಳನ್ನು (Peacock feather) ಬಳಕೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅವುಗಳ ರಫ್ತು ಮಾಡುವಂತೆ ಇಲ್ಲ ಎಂದು ಸಚಿವ ಈಶ್ವರ ಖಂಡ್ರೆ (Minister Ishwar Khandre) ಈಚೆಗೆ ಸ್ಪಷ್ಟಪಡಿಸಿದ್ದರು. ನವಿಲು ಗರಿಗಳನ್ನು ದರ್ಗಾ ಹಾಗೂ ಮಸೀದಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಮೌಲ್ವಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಮಾಡಿದ್ದ ಪ್ರಶ್ನೆಗೆ ಸಚಿವರು ಈ ಉತ್ತರವನ್ನು ನೀಡಿದ್ದರು.
ಸೆಕ್ಷನ್ 43ರಡಿಯಲ್ಲಿ ವನ್ಯಜೀವಿ ಕಾಯ್ದೆ 72 ಇದ್ದು, ಈ ಕಾಯ್ದೆಯಲ್ಲಿ ನವಿಲು ಗರಿಗಳಿಗೆ ವಿನಾಯಿತಿ ಇದೆ. ಇವುಗಳನ್ನು ರಪ್ತು ಮಾಡುವಂತಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳುವ ಮೂಲಕ ದರ್ಗಾ, ಮಸೀದಿಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಿರುವ ಮೌಲ್ವಿಗಳಿಗೆ ಯಾವುದೇ ರೀತಿಯ ಕಾನೂನು ತೊಡಕು ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ