ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಕೇವಲ ಮುಸ್ಲಿಮರಿಗೆ ಮಾತ್ರ ಮೈದಾನ ಬಳಸುತ್ತಿರುವುದಕ್ಕೆ ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿರುವುದರಿಂದ ಮೈದಾನದ ಮೇಲೆ ನಿಗಾ ಇಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮೈದಾನ ವಿವಾದದಿಂದ ಗಲಭೆಗಳು ನಡೆಯುವ ಮುನ್ನವೇ ಎಚ್ಚೆತ್ತಿರುವ ಬಿಬಿಎಂಪಿ, ಪೊಲೀಸ್ ಇಲಾಖೆಯ ಮನವಿ ಮೇರೆಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ಮೈದಾನದಲ್ಲಿ ಒಟ್ಟು 12 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಿದ್ದು, ಈದ್ಗಾ ಗೋಡೆಯ ಸುತ್ತಲೂ 8 ಸಿಸಿ ಕ್ಯಾಮರಾಗಳಿಂದ ನಿಗಾ ಇಡಲಾಗುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮೈದಾನಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಅಧಿಕಾರಿಗಳು ತೀರ್ಮಾನಿಸಿದ್ದು, ಸ್ಥಳದಲ್ಲಿ ಸುಮಾರು 50 ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಸದ್ಯ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಮೈದಾನದಲ್ಲಿ ಯಾವುದೇ ಗಲಾಟೆ, ಪ್ರತಿಭಟನೆಗೆ ಅವಕಾಶ ಇಲ್ಲ. ಇನ್ನೆರಡು ದಿನಗಳಲ್ಲಿ ದಿನಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಸದ್ಯ ಸಿಬ್ಬಂದಿ ಕಂಬಗಳನ್ನು ನೆಡಲು ಗುಂಡಿಗಳನ್ನು ತೋಡಿ ಸಿದ್ದತೆ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ ಬಿಬಿಎಂಬಿ ಪ್ರೌಢ ಶಾಲೆಯಲ್ಲಿ ಸಿಸಿ ಕ್ಯಾಮರಾಗಳ ಮಾನಿಟರ್ ವ್ಯವಸ್ಥೆ ಮಾಡಿ 24 ಗಂಟೆಗಳ ಕಾಲ ಪೊಲೀಸರು, ಮೈದಾನದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಡಲಿದ್ದಾರೆ.
ಸ್ಥಳೀಯರ ವಿರೋಧ: ಇನ್ನು ಈದ್ಗಾ ಮೈದಾನಕ್ಕೆ ಸಿಸಿ ಟಿವಿ ಅಳವಡಿಕೆಗೆ ಪೊಲೀಸರು ಮುಂದಾಗಿರುವುದಕ್ಕೆ ಸ್ಥಳಿಯ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ವಿವಾದಿತ ಸ್ಥಳದಲ್ಲಿ ಏಕಾಏಕಿ ಸಿಸಿ ಕ್ಯಾಮರಾ ಅಳವಡಿಸುವ ಅವಶ್ಯಕತೆ ಏನಿದೆ? ಕೇಬಲ್ ಅಳವಡಿಸಲು ಜೆಸಿಬಿಯಿಂದ ಗುಂಡಿ ಅಗೆಯುತ್ತಾರಾ, ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆಸಿ ಯಾವುದೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಸ್ಲಿಮರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಮುಸ್ಲಿಂ ವಕ್ಫ್ ಬೋರ್ಡ್‌ನಿಂದ ಮಹತ್ವದ ನಿರ್ಧಾರ: ಈದ್ಗಾ ಮೈದಾನದಲ್ಲಿ ಆಗುತ್ತಾ ಧ್ವಜಾರೋಹಣ?