ಬೆಂಗಳೂರು: ಬುಕ್ ಬ್ರಹ್ಮ (Book Brahma) ಹಾಗೂ ನವ ಕರ್ನಾಟಕ ಪ್ರಕಾಶನದ (Nava Karnataka Prakashana) ಸಹಯೋಗದಲ್ಲಿ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023ರ (Story Contest 2023) ಟಾಪ್ 25 ಕಥೆಗಳ (Top 25 Story) ಸಂಕಲನ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಈ ಕಥಾ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದ್ದು, ಅದಕ್ಕೆ “ಇರದ ಇರುವಿನ ತಾವು” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಇದೇ ಅಕ್ಟೋಬರ್ 13ರ ಶುಕ್ರವಾರ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಕಾದಂಬರಿಕಾರ, ಕವಿ ಎಂ.ಆರ್. ದತ್ತಾತ್ರಿ ಮುಖ್ಯ ಅತಿಥಿಗಳಾಗಿದ್ದಾರೆ. ನವ ಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ಉಡುಪ ಅವರು ಉಪಸ್ಥಿತರಿರಲಿದ್ದಾರೆ.
ಲೈವ್‌ನಲ್ಲಿಯೂ ವೀಕ್ಷಣೆ ಮಾಡಬಹುದು
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1 ಲಕ್ಷ ರೂ. ಮೌಲ್ಯದ ಕಾದಂಬರಿ ಪ್ರಶಸ್ತಿ ಘೋಷಣೆ
2023ನೇ ಸಾಲಿನ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ (kannada novel) ಪುರಸ್ಕಾರ ಎಂ.ಆರ್. ದತ್ತಾತ್ರಿ ಅವರ ಅಂಕಿತ ಪ್ರಕಾಶನದಿಂದ ಪ್ರಕಟವಾದ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿಗೆ ಲಭಿಸಿತ್ತು. ಕಾದಂಬರಿ ಪುರಸ್ಕಾರವು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು. 2023 ಆಗಸ್ಟ್ 15ರಂದು ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾಸ್ಪರ್ಧೆ’ ಮತ್ತು ‘ಕಾದಂಬರಿ ಪುರಸ್ಕಾರ’ ಸಮಾರಂಭದಲ್ಲಿ ಬಹುಮಾನಗಳನ್ನು ಘೋಷಿಸಲಾಗಿತ್ತು.
“ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆ”ಯ (kannada short story) ಪ್ರಥಮ ಬಹುಮಾನ ಕಥೆಗಾರ ಇಂದ್ರಕುಮಾರ್ ಎಚ್. ಬಿ ಅವರಿಗೆ ಲಭಿಸಿತ್ತು. ದ್ವಿತೀಯ ಬಹುಮಾನ ಅಕ್ಷಯ ಪಂಡಿತ್ ಅವರಿಗೆ ಹಾಗೂ ತೃತೀಯ ಬಹುಮಾನ ವಿಕಾಸ್ ನೇಗಿಲೋಣಿ ಅವರಿಗೆ ಲಭಿಸಿತ್ತು. ಪ್ರಥಮ ಬಹುಮಾನ 50,000 ನಗದು ಪ್ರಶಸ್ತಿ ಫಲಕವನ್ನೊಳಗೊಂಡಿದ್ದರೆ, ದ್ವಿತೀಯ ಬಹುಮಾನ 25,000 ನಗದು ಹಾಗೂ ಪ್ರಶಸ್ತಿ ಫಲಕ ಹಾಗೂ ತೃತೀಯ ಬಹುಮಾನ 15,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿತ್ತು.
ಇದನ್ನೂ ಓದಿ: Raja Marga Column : ಪರಿಸರ ಹೋರಾಟ; ಇದು ಕಾರಂತರ ಹುಚ್ಚುಮನಸ್ಸಿನ ಅತಿ ಶ್ರೇಷ್ಠ ಮುಖ!
ಸಮಾಧಾನಕರ ಬಹುಮಾನ ಇವರಿಗೆ
ಕಾದಂಬರಿಯಲ್ಲಿ ಸಮಾಧಾನಕರ ಬಹುಮಾನಗಳಿಗೆ ಉಷಾ ನರಸಿಂಹನ್ ಅವರ ಅಂಕಿತ ಪ್ರಕಾಶನದ ‘ಕೆಂಡದ ರೊಟ್ಟಿ’, ಕಾ.ತ. ಚಿಕ್ಕಣ್ಣ ಅವರ ರಶ್ಮಿ ಪ್ರಕಾಶನದ ‘ಪುರಾಣ ಕನ್ಯೆ’, ಪೂರ್ಣಿಮಾ ಮಾಳಗಿಮನಿ ಅವರ ಸಪ್ನ ಬುಕ್ ಹೌಸ್ ಪ್ರಕಟಿಸಿದ ‘ಅಗಮ್ಯ’, ಹಾಗೂ ಎಚ್.ಎಸ್. ಅನುಪಮಾ ಅವರ ಲಡಾಯಿ ಪ್ರಕಾಶನದ ‘ಬೆಳಗಿನೊಳಗು ಮಹಾದೇವಿಯಕ್ಕ’ ಕೃತಿಗಳು ಆಯ್ಕೆಯಾಗಿದ್ದು, ಈ ನಾಲ್ಕು ಕೃತಿಗಳಿಗೆ 5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗಿದೆ. ಕತೆಗಳಲ್ಲಿ ಶರತ್ ಭಟ್ ಸೇರಾಜೆ, ಪೂರ್ಣಿಮಾ ಭಟ್ಟ ಸಣ್ಣಕೇರಿ, ಜಯರಾಮಚಾರಿ, ದೀಪ್ತಿ ಭದ್ರಾವತಿ, ಹಾಗೂ ವಿಜಯಶ್ರೀ ಎಂ ಹಾಲಾಡಿ ಸೇರಿದಂತೆ ಐವರು ಕಥೆಗಾರರಿಗೆ ಸಮಾಧಾನಕರ ಬಹುಮಾನ ನೀಡಲಾಗಿದೆ.