ಕಾರವಾರ: ಭಾರಿ ಗಾತ್ರದ ತೊರ್ಕೆ ಮೀನು (Torke Fish) ಅಂಕೋಲಾ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿರುವುದು ಮತ್ಸ್ಯಪ್ರಿಯರ ಬಾಯಲ್ಲಿ ನೀರೂರಿಸುವಂತೆ ಮಾಡಿತ್ತು. ಆದರೆ, ಅದು ಭರ್ಜರಿ ದರಕ್ಕೇ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆಯಿತು.
ಬೆಳಂಬಾರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ತೊರ್ಕೆ ಮೀನು ಸಿಕ್ಕಿದ್ದು, ಮಾರುಕಟ್ಟೆಗೆ ತರಲಾಗಿದೆ. 4.5 ಅಡಿ ಗಾತ್ರದ, 5 ಅಡಿ ಉದ್ದದ ಬಾಲ ಹೊಂದಿರುವ ಈ ಮೀನು ಸುಮಾರು 120 ಕೆಜಿ ತೂಕವನ್ನು ಹೊಂದಿದೆ. ಈ ಮೀನನ್ನು ನೋಡಲು ಗ್ರಾಹಕರು ಮುಗಿಬಿದ್ದಿದ್ದರು. ಇದರ ದರ 10 ಸಾವಿರ ರೂಪಾಯಿ ಎಂದಾಗ ಗ್ರಾಹಕರು ಕೊಳ್ಳಲು ಹಿಂಜರಿದರು. ಕೊನೆಗೂ ಮಾತುಕತೆ ಮೂಲಕ ಹೊಂದಾಣಿಕೆ ಮಾಡಿ ಗ್ರಾಹಕರೊಬ್ಬರು 8 ಸಾವಿರಕ್ಕೆ ಖರೀದಿಸಿದರು.
ಇದನ್ನೂ ಓದಿ | ಮಹಿಳೆ ಯಾರದೇ ಆಸ್ತಿಯಲ್ಲ: ಸುಪ್ರೀಂ ಕೋರ್ಟ್
ಅತಿ ರುಚಿ ಮೀನುಗಳಲ್ಲಿ ಒಂದಾಗಿರುವ ತೊರ್ಕೆ ಮೀನಿನ ಸಂತತಿ ಇತ್ತೀಚೆಗೆ ಜಲಮಾಲಿನ್ಯದಿಂದಾಗಿ ಕ್ಷೀಣಿಸುತ್ತಿದೆ. ಬೆಳಂಬಾರ ಭಾಗದ ಸಮುದ್ರ ಪ್ರದೇಶದಲ್ಲಿ ಹೇರಳವಾಗಿ ನೆಲೆ ಕಂಡುಕೊಂಡಿದ್ದ ಈ ಮೀನು, ಇತ್ತೀಚೆಗೆ ಅಪರೂಪವಾಗುತ್ತಿದೆ ಎನ್ನುತ್ತಾರೆ ಮೀನು ಮಾರುವ ಮಹಿಳೆಯರು.
ಇದನ್ನೂ ಓದಿ | MV Ganga Vilas | ವಿಶ್ವದ ಅತಿ ಉದ್ದದ ರಿವರ್ ಕ್ರೂಸ್‌ನಲ್ಲಿ ಹೋಗಬೇಕಾ? ಮುಂದಿನ ವರ್ಷದ ಮಾರ್ಚ್‌ವರೆಗೂ ಕಾಯಬೇಕು!
ಜಿಲ್ಲೆಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಎರಡು ವಿಧದ ತೊರ್ಕೆ ಮೀನುಗಳು ಸಾಮಾನ್ಯವಾಗಿ ಸಿಗುತ್ತವೆ. ಚುಕ್ಕಿ ಮಾದರಿಯ ಮೇಲ್ಮೈ ಹೊಂದಿರುವ ತೊರ್ಕೆ ಮೀನಾಗಿದ್ದು. ಇದನ್ನು ಸ್ಥಳೀಯವಾಗಿ ಕೊಂಕಣಿಯಲ್ಲಿ ‘ವಾಘಳೆ’ ಎಂದು ಕರೆಯಲಾಗುತ್ತದೆ. ಇನ್ನೊಂದು ಆಕಳ ಮೂಗಿನ ರೀತಿಯ ಆಕಾರ ಹೊಂದಿರುವ ಕಪ್ಪು ಬಣ್ಣದ ಮೇಲ್ಮೈ ಹೊಂದಿರುವ ತೊರ್ಕೆಯನ್ನು ‘ಶಾವಣೆ ವಾಘಳೆ’ ಎಂದು ಕರೆಯಲಾಗುತ್ತದೆ.
ಶಾರ್ಕ್ ಜಾತಿಗೆ ಸೇರಿರುವ ತೊರ್ಕೆ ಮೀನು ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸುಮಾರು ಎರಡು ಮೀಟರ್‌ನಷ್ಟು ಉದ್ದ ಬೆಳೆಯುವ ಇವುಗಳ ಬಾಲ ಉದ್ದವಾಗಿದ್ದು, ತುದಿಯಲ್ಲಿ ಎರಡು ಮುಳ್ಳುಗಳನ್ನು ಹೊಂದಿರುತ್ತದೆ. ಗರಿಷ್ಠ 16 ವರ್ಷಗಳ ಕಾಲ ಬದುಕುವ ಈ ಮೀನುಗಳ ಸಂತತಿ ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಸಾಲಿನಲ್ಲಿ ಗುರುತಿಸಿಕೊಂಡಿವೆ.
ಇದನ್ನೂ ಓದಿ | Shri Ram-Janaki Yatra | ರಾಮ ಜನ್ಮಸ್ಥಾನದಿಂದ ಸೀತೆ ಹುಟ್ಟಿದ ಊರಿಗೆ ಶ್ರೀ ರಾಮ-ಜಾನಕಿ ಯಾತ್ರೆ: ಫೆ.17ರಿಂದ ಶುರು