Site icon Vistara News

Tower Clock | ಕಾಂಗ್ರೆಸ್‌ನಿಂದ ಡಬಲ್ ಗೇಮ್‌; ಶಾಸಕ ಜಿ.ಸೋಮಶೇಖರ ರೆಡ್ಡಿ ವಾಗ್ದಾಳಿ

clock tower

ಬಳ್ಳಾರಿ: ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಟವರ್ ಕ್ಲಾಕ್ (Tower Clock) ನಿರ್ಮಾಣ ವಿಚಾರದಲ್ಲಿ ಕಾಂಗ್ರೆಸ್ ಡಬಲ್ ಗೇಮ್ ನಿಲುವು ತಳೆದಿದೆ ಎಂದು ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಹಳೆಯ ಟವರ್ ಕ್ಲಾಕ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಸೋಮಶೇಖರ ರೆಡ್ಡಿ, ಟವರ್ ಕ್ಲಾಕ್ ನಿರ್ಮಾಣದ ಪೂಜೆಗೆ ಕಾಂಗೆಸ್ ಮೇಯರ್ ಬಂದಿದ್ದಾರೆ. ಪಾಲಿಕೆ ಸಭೆಯಲ್ಲಿ ಠರಾವು ಹೊರಡಿಸಿದ್ದಾರೆ. ಈಗ ಪ್ರತಿಭಟನೆ ಮಾಡುವುದು ಎಷ್ಟು ಸರಿ? ಜನರು ಇದೆಲ್ಲವನ್ನೂ ನೋಡುತ್ತಿದ್ದಾರೆ ಎಂದರು.

ಮಹಾನಗರ ಪಾಲಿಕೆಯಿಂದ ಪರವಾನಿಗೆ ಸಿಕ್ಕಿದೆ. ಮೇಯರ್ ರಾಜೇಶ್ವರಿ ಅವರು ಸಹಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಎನ್ಓಸಿ ನೀಡಿದ್ದಾರೆ. ಬಳ್ಳಾರಿ ನಗರ ಸುಂದರೀಕರಣ ಮಾಡಬೇಕೆಂದು ವಿದೇಶದಲ್ಲಿರುವ ಟವರ್ ಮಾದರಿಯಲ್ಲಿಯೇ, ಒಳಗಡೆ ಲಿಫ್ಟ್ ವ್ಯವಸ್ಥೆಯೊಂದಿಗೆ 7 ಕೋಟಿ ರೂ.ವೆಚ್ಚದಲ್ಲಿ ಟವರ್ ಕ್ಲಾಕ್ ನಿರ್ಮಾಣಕ್ಕೆ ಸಚಿವ ಬಿ.ಶ್ರೀರಾಮುಲು ಮುಂದಾಗಿದ್ದಾರೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ, ಇಬ್ಬರೂ ಸೇರಿ ಅಭಿವೃದ್ಧಿ ಮಾಡೋಣ, ನಾವೆಲ್ಲರೂ ಕೂಡಿಕೊಂಡು ನವಬಳ್ಳಾರಿಯನ್ನು ನಿರ್ಮಾಣ ಮಾಡೋಣ. ಆದರೆ, ಕಾಂಗ್ರೆಸ್ ನಾಯಕರು ಅಸ್ತಿತ್ವಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಣ್ಣದೊಂದು ಟವರ್ ನಿರ್ಮಾಣ ಮಾಡಲಿಲ್ಲ. ಸಣ್ಣ ಟವರ್‌ ತೆರವುಗೊಳಿಸಿ, ದೊಡ್ಡ ಟವರ್ ಕ್ಲಾಕ್ ಮಾಡುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅಸಮಾಧಾನವನ್ನು ಹೊರಹಾಕಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಬಿಜೆಪಿ ಮುಖಂಡರಾದ ವೀರಶೇಖರ ರೆಡ್ಡಿ, ಮಲ್ಲನಗೌಡ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ | ರಾತ್ರೋರಾತ್ರಿ ಬಳ್ಳಾರಿಯ ಗಡಿಯಾರ ಕಂಬ ತೆರವು, ಪ್ರತಿಪಕ್ಷಗಳ ಪ್ರತಿಭಟನೆ

Exit mobile version