Site icon Vistara News

Toyota: ಗ್ರಾಮೀಣ ಯುವ ಜನತೆಗೆ ಟೊಯೊಟಾದಿಂದ ಉತ್ತಮ ತರಬೇತಿ, ಶಿಕ್ಷಣ; ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘನೆ

Toyota

ಬೆಂಗಳೂರು: ಟಿಟಿಟಿಐ ಸಂಸ್ಥೆಯು (Toyota) ಕರ್ನಾಟಕದ ಗ್ರಾಮೀಣ ಭಾಗದ ಯುವ ಜನತೆಗೆ ಉತ್ತಮ ತರಬೇತಿ ಮತ್ತು ಶಿಕ್ಷಣ ನೀಡಿ ಅವರನ್ನು ಸಬಲರನ್ನಾಗಿ ಮಾಡುತ್ತಿರುವುದು ಖುಷಿಯ ವಿಚಾರ. ಇಂತಹ ಯೋಜನೆಗಳು ಸಮಾಜದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಾಹಿಸುತ್ತವೆ ಮತ್ತು ಸಾಮೂಹಿಕ ಅಭಿವೃದ್ಧಿ ಉಂಟು ಮಾಡುವ ಮೂಲಕ ಧನಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ 15ನೇ ಬ್ಯಾಚ್‌ನ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, ಬಳಿಕ ಮಾತನಾಡಿದ ಶ್ರೀಗಳು, “ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ಘಟಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ವಾಹನೋದ್ಯಮಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಕೆಲಸ ಮಾಡಲು ಸೂಕ್ತವಾಗಿ ಸಿದ್ಧರಾಗಿರುವ ನುರಿತ ವೃತ್ತಿಪರರನ್ನು ಬೆಳೆಸುವ ಸಂಸ್ಥೆಯ ಬದ್ಧತೆಗೆ ಈ ಯುವ ಪದವೀಧರರು ಪುರಾವೆಯಾಗಿ ನಿಂತಿದ್ದಾರೆ. ಅವರು ವೃತ್ತಿ ಆರಂಭಿಸುತ್ತಿದ್ದಂತೆ ತಮ್ಮಲ್ಲಿ ಮೈಗೂಡಿಸಿಕೊಂಡಿರುವ ಕೌಶಲ್ಯ ಮತ್ತು ಮೌಲ್ಯಗಳ ಮೂಲಕ ಸಮಾಜ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡಲಿದ್ದಾರೆ ಎಂಬ ನಂಬಿಕೆ ನಮಗಿದೆ. ಎಲ್ಲಾ ಪದವೀಧರರಿಗೂ ಶುಭವನ್ನು ಹಾರೈಸುತ್ತಿದ್ದೇವೆ ಮತ್ತು ನುರಿತ ಸಮರ್ಥ ಉದ್ಯೋಗಿಗಳನ್ನು ಬೆಳೆಸುವ ಟಿಟಿಟಿಐನ ಬದ್ಧತೆಯನ್ನು ಶ್ಲಾಘಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Lalbagh Flower Show: ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ದೊರೆಯಬೇಕು; ಸಿದ್ದರಾಮಯ್ಯ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, ಟೊಯೋಟಾದಲ್ಲಿ ನಾವು ಗ್ರಾಮೀಣ ಭಾಗದ ಯುವಜನತೆಯನ್ನು ಸಮಗ್ರ 360-ಡಿಗ್ರಿ ತರಬೇತಿಯ ಮೂಲಕ ವಿಶ್ವದರ್ಜೆಯ ತಂತ್ರಜ್ಞರನ್ನಾಗಿ ಬದಲಾಯಿಸಲು ಬದ್ಧರಾಗಿದ್ದಾರೆ. ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ 1,000ಕ್ಕೂ ಹೆಚ್ಚು ಗ್ರಾಮೀಣ ಯುವಕರ ಸಾಲಿಗೆ ಇವತ್ತು 214 ಪದವೀಧರರು ಸೇರಿದ್ದಾರೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ.

ಕರ್ನಾಟಕದ ವಿವಿಧ ಜಿಲ್ಲೆಗಳ ಈ ಪದವೀಧರರು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಸಂಸ್ಥೆಯಲ್ಲಿ ಮತ್ತು ಕತಾರ್, ಜೋರ್ಡಾನ್ ಮತ್ತು ಸ್ಲೋವಾಕಿಯಾದಂತಹ ಅಂತರಾಷ್ಟ್ರೀಯ ಮಟ್ಟದ ವಿಭಾಗಗಳಲ್ಲಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಜತೆಗೆ ನಾವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ 65 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) ಮತ್ತು ಗವರ್ನ್‌ಮೆಂಟ್ ಟೂಲ್ ರೂಮ್ ಆಂಡ್ ಟ್ರೈನಿಂಗ್ ಸೆಂಟರ್ ಗಳನ್ನು (ಜಿಟಿಟಿಸಿಗಳು) ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಪ್ರಾಂಶುಪಾಲರು ಮತ್ತು ಅಧ್ಯಾಪಕರಿಗೆ ತರಬೇತಿ, ಮೂಲಸೌಕರ್ಯ ನೆರವು ಮತ್ತು ಸಂಸ್ಕೃತಿ ನಿರ್ಮಾಣ ವಿಚಾರದಲ್ಲಿ ತರಬೇತಿ ಕಾರ್ಯಕ್ರಮಗಳ ಮೇಲೆ ಗಮನ ಹರಿಸುತ್ತಿದ್ದೇವೆ. ಇಲ್ಲಿಯವರೆಗೆ ಟೊಯೋಟಾ ಭಾರತದಲ್ಲಿ 110,000 ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದ್ದು, ನಿರಂತರವಾಗಿ ಉದ್ಯೋಗಾವಕಾಶ ಒದಗಿಸಿ ಬೆಳೆಸುತ್ತಿದೆ. ಆ ಮೂಲಕ ಸಮಾಜಕ್ಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ತಿಳಿಸಿದರು.

ಘಟಕೋತ್ಸವದಲ್ಲಿ ಕರ್ನಾಟಕದ ಗ್ರಾಮೀಣ ಹಿನ್ನೆಲೆಯ 58 ಟಿಟಿಟಿಐ ವಿದ್ಯಾರ್ಥಿಗಳು ಮತ್ತು 156 ಟೊಯೋಟಾ ಕೌಶಲ್ಯ ಕೋರ್ಸ್ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆದುಕೊಂಡರು. ವಿದ್ಯಾರ್ಥಿಗಳು ಕೋರ್ಸು ಪೂರ್ಣಗೊಳಿಸಿಕೊಳ್ಳುವುದರ ಮೂಲಕ ಜ್ಞಾನ, ಕೌಶಲ್ಯ, ದೇಹ ಭಾಷೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಜಾಗತಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಸಮಗ್ರ ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಟಿಕೆಎಂ ಆಡಳಿತ ಮಂಡಳಿ, ಟೊಯೋಟಾ ಸಮೂಹ ಕಂಪನಿಗಳ ಪ್ರತಿನಿಧಿಗಳು, ಪೂರೈಕೆದಾರರು, ಆಟೋಮೋಟಿವ್ ಸ್ಕಿಲ್ಸ್ ಡೆವಲಪ್‌ಮೆಂಟ್ ಕೌನ್ಸಿಲ್ (ಎಎಸ್‌ಡಿಸಿ) ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (ಎನ್ಎಸ್‌ಡಿಸಿ) ಪ್ರತಿನಿಧಿಗಳು, ಟೊಯೋಟಾ ಟೆಕ್ನಿಕಲ್ ಸ್ಕಿಲ್ ಅಕಾಡೆಮಿ- ಜಪಾನ್, ಟೊಯೋಟಾ ಇಂಡೋನೇಷ್ಯಾ ಅಕಾಡೆಮಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಘಟಕೋತ್ಸವ ಕಾರ್ಯಕ್ರಮದಲ್ಲಿ ಪದವೀಧರರು ಎನ್ಎಸಿ (ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್), ಎಎಸ್‌ಡಿಸಿ ಸರ್ಟಿಫಿಕೇಟ್ ಮತ್ತು ಜೆಐಎಂ ಹಾಗೂ ಟೊಯೋಟಾ ಸರ್ಟಿಫಿಕೇಟ್ ಸೇರಿದಂತೆ ಹಲವು ಸರ್ಟಿಫಿಕೇಷನ್‌ಗಳನ್ನು ಸ್ವೀಕರಿಸಿದರು. ಇಲ್ಲಿಯವರೆಗೂ ಈ ಕಾರ್ಯಕ್ರಮದಲ್ಲಿ 1,020 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಮತ್ತು 452 ಮಂದಿ ಟಿಕೆಎಂ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ. ಉಳಿದ 568 ಮಂದಿ ಸಮೂಹ ಕಂಪನಿಗಳು, ಪೂರೈಕೆದಾರ ಕಂಪನಿಗಳು ಮತ್ತು ಸಾಗರೋತ್ತರ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಪದವೀಧರರು ಉದ್ಯಮದಲ್ಲಿನ ವಿವಿಧ ಕಂಪನಿಗಳಿಗೆ ಸೇರುವ ಅವಕಾಶ ಮತ್ತು ಅರ್ಹತೆ ಗಳಿಸಿದ್ದಾರೆ.

Exit mobile version