ಬೆಂಗಳೂರು: ಸಂಚಾರ ಪೊಲೀಸ್ ಇಲಾಖೆಯಿಂದ ದಂಡ ಬಾಕಿ ಪಾವತಿಗೆ ಶೇ.50 ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಸಂಚಾರ ನಿಯಮ (Traffic Fine) ಉಲ್ಲಂಘಿಸಿದ ವಾಹನ ಸವಾರರಿಂದ 5 ದಿನಗಳಲ್ಲಿ ವಸೂಲಿಯಾಗಿರುವ ಮೊತ್ತ 50 ಕೋಟಿ ರೂಪಾಯಿ ದಾಟಿದೆ. 5ನೇ ದಿನವಾದ ಬುಧವಾರವೂ ನಗರದಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ದಂಡ ಪಾವತಿಸಿದರು.
ಬುಧವಾರ 3.23 ಲಕ್ಷ ಪ್ರಕರಣಗಳಲ್ಲಿ 9.6 ಕೋಟಿ ರೂಪಾಯಿ ದಂಡದ ಹಣ ಸಂಗ್ರಹವಾಗಿದೆ. ಈವರೆಗೆ ಒಟ್ಟು 18. 26 ಲಕ್ಷ ಪ್ರಕರಣಗಳಲ್ಲಿ ಒಟ್ಟು 51 .85 ಕೋಟಿ ರೂಪಾಯಿ ವಸೂಲಿಯಾಗಿದೆ. ಈ ಬಗ್ಗೆ ಟ್ರಾಫಿಕ್ ಸ್ಪೆಶಲ್ ಕಮಿಷನರ್ ಸಲೀಂ ಮಾತನಾಡಿ, ದಂಡ ಪಾವತಿಗೆ ಶೇ.೫0 ರಿಯಾಯಿತಿ ನೀಡಿರುವುದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಕಳೆದ ೫ ದಿನಗಳಲ್ಲಿ 50 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಶೀಘ್ರ ವಸೂಲಿಯಾಗಲಿದೆ. ಸದ್ಯ ಅವಧಿ ವಿಸ್ತರಣೆ (ಫೆ.11 ಕೊನೆಯ ದಿನ) ಬಗ್ಗೆ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು.
ಮೊದಲ ದಿನ 5.61 ಕೋಟಿ ರೂಪಾಯಿ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ 6.80 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಮೂರನೇ ದಿನ 6.31 ಕೋಟಿ ಸಂಗ್ರಹಗೊಂಡಿತ್ತು. ಹಾಗೆಯೇ ನಾಲ್ಕನೇ ದಿನ 7.1 ಕೋಟಿ ರೂಪಾಯಿ ಹಾಗೂ 5ನೇ ದಿನ 9.6 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಒಟ್ಟು 51 .85 ಕೋಟಿ ರೂಪಾಯಿ ವಸೂಲಿಯಾಗಿದೆ.