Site icon Vistara News

Traffic Violation : ರೋಡ್‌ಲ್ಲಿ ಮಗನ ಮೋಜಿನಾಟ; ಪೋಷಕರಿಗೆ ಬಿತ್ತು 20 ಸಾವಿರ ರೂ. ದಂಡ!

Traffic Violation

ಬೆಂಗಳೂರು: ಯುವಕರ ಹುಚ್ಚಾಟಕ್ಕೆ ಪೋಷಕರು ತೊಂದರೆಗೆ ಸಿಲುಕುವಂತಾಗಿದೆ. ಸ್ಕೂಟರ್‌ನಲ್ಲಿ ಸ್ನೇಹಿತರೊಂದಿಗೆ ತೆರಳುತ್ತಿದ್ದ ಯುವಕನೊಬ್ಬ ಪಕ್ಕದಲ್ಲಿ ಹೋಗುತ್ತಿದ್ದ ಕಾರೊಂದರ ಕನ್ನಡಿಯನ್ನೇ ಒಡೆದು ಹಾಕಿ ಪುಂಡಾಟ (Traffic Violation) ಮೆರೆದಿದ್ದಾರೆ. ಇವರ ಈ ಮೋಜಿನಾಟಕ್ಕೆ ಪೋಷಕರು ಠಾಣೆ ಮಟ್ಟಿಲೇರಿದ್ದಾರೆ.

ಮೂವರು ಯುವಕರು ಒಂದೇ ಸ್ಕೂಟರ್‌ ಏರಿ ರಸ್ತೆಗಿಳಿದಿದ್ದರು. ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ಸ್ಕೂಟರ್‌ ಓಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಹಿಂದೆ ಕುಳಿತಿದ್ದ ಯುವಕನೊಬ್ಬ ಬಲಗಡೆಗೆ ಹೋಗುತ್ತಿದ್ದ ಕಾರಿಗೆ ಕೈ ಚಾಚಿ ಕನ್ನಡಿಯನ್ನು ಒಡೆದು ಹಾಕಿದ್ದ. ಮೀರರ್‌ ಕೆಳಗೆ ಬಿದ್ದ ಬಳಿಕ ನಗುತ್ತಲೇ ಕಾರನ್ನು ನೋಡಿಕೊಂಡು ಹೋಗಿದ್ದಾನೆ.

ಬೆಂಗಳೂರಿನಲ್ಲಿ ಕಳೆದ ನವೆಂಬರ್‌ 5ರ ಭಾನುವಾರ ಈ ಘಟನೆ ನಡೆದಿದೆ. ಇವರ ಕೃತ್ಯವೆಲ್ಲವೂ ಹಿಂದೆ ಬರುತ್ತಿದ್ದ ಕಾರೊಂದರ ಡ್ಯಾಶ್‌ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿ ಬೆಂಗಳೂರು ನಗರ ಪೊಲೀಸರ ಗಮನವನ್ನು ಸೆಳೆಯಲಾಗಿತ್ತು.

ವಿಡಿಯೊ ಆಧಾರಿಸಿ ಬೆಂಗಳೂರು ನಗರ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚಿ, ಮಾಲೀಕರ ಹಿಂದೆ ಬಿದ್ದ ಪೊಲೀಸರು ಜಯನಗರಕ್ಕೆ ಬಂದು ನಿಂತಿದ್ದರು. ಈ ವೇಳೆ 21 ವರ್ಷದ ರೋಹಿತ್‌ ಎಂಬಾತ ತನ್ನ ತಾಯಿ ಹೆಸರಿನಲ್ಲಿ ನೋಂದಣಿ ಆಗಿದ್ದ ಸ್ಕೂಟರ್‌ನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿದೆ.

ರೋಹಿತ್ ಪೆಟ್ರೋಲ್ ಬಂಕ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ ಭಾನುವಾರ ಮನೆಯಲ್ಲಿದ್ದ ತನ್ನ ತಾಯಿ ಸ್ಕೂಟರ್‌ ತೆಗೆದುಕೊಂಡು ಹೊರಗೆ ಬಂದಿದ್ದ. ತನ್ನ ಸ್ನೇಹಿತನಿಗೆ ಸ್ಕೂಟರ್‌ ಓಡಿಸಲು ಹೇಳಿ ಹಿಂಬದಿ ಕುಳಿತ ರೋಹಿತ್, ಕಾರಿನ ಕನ್ನಡಿಯನ್ನು ಒಡೆದು ಹಾಕಿದ್ದಾನೆ.

ಈ ವಿಡಿಯೊವನ್ನು ಪೊಲೀಸರು ರೋಹಿತ್‌ನ ತಾಯಿಗೆ ತೋರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ರೋಹಿತ್‌ನನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ತಮಾಷೆಗೆ ಹೀಗೆ ಮಾಡಿದ್ದು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಸದ್ಯ ಪೊಲೀಸರ ತನಿಖೆಯಲ್ಲಿ ಬೇರೆ ಬೇರೆ ರೀತಿಯಲ್ಲಿ 39 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ತಿಳಿದು ಬಂದಿದೆ. ಸ್ಕೂಟರ್ ವಶಪಡಿಸಿಕೊಂಡಿದ್ದು, ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಸುಮಾರು 21,500 ರೂ.ಗಳ ದಂಡ ವಿಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version