ಮಂಗಳೂರು: ನೀವೆಲ್ಲ ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ (Puneeth Rajkumar) ಬಾಲ ನಟನಾಗಿ ಅಭಿನಯಿಸಿದ್ದ ಭಾಗ್ಯವಂತ (Bhagyavantha film) ಸಿನಿಮಾವನ್ನು ನೋಡಿರಬಹುದು. ಆ ಸಿನಿಮಾದ ಕೊನೆಯಲ್ಲಿ ಬಾಲಕ ಪುನೀತ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾ ರೈಲು ದುರಂತವನ್ನು (Train accident) ತಪ್ಪಿಸಿ ಸಾವಿರಾರು ಜನರ ಪ್ರಾಣವನ್ನು ಉಳಿಸಿ ಭಾಗ್ಯವಂತನಾಗಿದ್ದ. ಅದು ಸಿನಿಮಾ ಕಥೆಯಾದರೆ, ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ 70ರ ವೃದ್ಧೆಯೊಬ್ಬರು ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದ್ದಾರೆ.
ರೈಲು ಹಳಿಗೆ ಮರ ಬಿದ್ದಿದ್ದನ್ನು ಗಮನಿಸಿದ ವೃದ್ಧೆ ಚಂದ್ರಾವತಿ (70) ತಕ್ಷಣವೇ ಎಚ್ಚೆತ್ತುಕೊಂಡು ಓಡಿ ಹೋಗಿ ಕೆಂಪು ಬಟ್ಟೆ ತೋರಿಸಿ ರೈಲನ್ನು ನಿಲ್ಲಿಸಿದ್ದಾರೆ. ಈ ಮೂಲಕ ನಡೆಯುತ್ತಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿ, ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾರೆ. ವೃದ್ಧೆಯ ಸಮಯಪ್ರಜ್ಞೆಗೆ ರೈಲ್ವೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಮಾರ್ಚ್ 21ರಂದು ಮಧ್ಯಾಹ್ನದ ಹೊತ್ತು ಆಗಷ್ಟೇ ಊಟ ಮುಗಿಸಿ ಮನೆಯ ಅಂಗಳದಲ್ಲಿ ಚಂದ್ರಾವತಿ ಓಡಾಡುತ್ತಿದ್ದರು. ಈ ವೇಳೆ ಎದುರಿನ ಹಳಿಗೆ ಏನೋ ಬಿದ್ದ ಶಬ್ಧ ಕೇಳಿ ಬಂದಿತ್ತು. ಬಂದು ನೋಡಿದಾಗ ಹಳಿಗೆ ದೊಡ್ಡ ಮರವೊಂದು ಅಡ್ಡಲಾಗಿ ಬಿದ್ದಿತ್ತು. ಅದೇ ಸಮಯಕ್ಕೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದು ತಿಳಿದಿತ್ತು.
ಆ ಬೃಹತ್ ಮರವನ್ನು ಒಬ್ಬರೆ ಪಕ್ಕಕ್ಕೆ ಸರಿಸುವುದು ಕಷ್ಟವಾಗಿತ್ತು, ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದರು. ಅದೇ ವೇಳೆಗೆ ರೈಲಿನ ಹಾರ್ನ್ ಕೇಳಿಸಿದ್ದು ಸಂಭವಿಸಬಹುದಾದ ದುರಂತವನ್ನು ತಪ್ಪಿಸಲೇಬೇಕೆಂದು ಕೂಡಲೆ ಎಚ್ಚೆತ್ತುಕೊಂಡ ಅವರು ಹೃದಯದ ಶಸ್ತ್ರಚಿಕಿತ್ಸೆ ಆಗಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಮನೆ ಬಳಿ ಬಂದು ಕೆಂಪು ಬಟ್ಟೆ ತಂದಿದ್ದಾರೆ.
ಇದನ್ನೂ ಓದಿ: SSLC Exam 2023: ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಸಾಮೂಹಿಕ ನಕಲು ಕಂಡು ದಂಗಾದ ಎಸ್‌ಪಿ ಇಷಾಪಂತ್
ರೈಲು ಬರುವ ವೇಳೆಗೆ ವೃದ್ಧೆ ಚಂದ್ರಾವತಿ ಹಳಿ ಮೇಲೆ ಓಡಿ ಬಂದು ಕೆಂಪು ಬಟ್ಟೆಯನ್ನು ಪ್ರದರ್ಶಿಸಿ ಅಪಾಯದ ಮುನ್ಸೂಚನೆಯನ್ನು ನೀಡಿದ್ದಾರೆ. ಅಪಾಯವನ್ನು ಅರಿತ ಲೋಕೋ ಪೈಲೆಟ್ ತಕ್ಷಣವೇ ರೈಲಿನ ವೇಗವನ್ನು ಕಡಿಮೆ ಮಾಡಿ ನಿಲ್ಲಿಸಿದ್ದಾರೆ. ಆ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಆನಂತರ ಸ್ಥಳೀಯರು ಹಾಗೂ ರೈಲ್ವೆ ಸಿಬ್ಬಂದಿ ಕೆಲವರು ಸೇರಿ ಸುಮಾರು ಅರ್ಧ ತಾಸಿನವರೆಗೂ ಮರವನ್ನು ತೆರವು ಮಾಡಿದ್ದಾರೆ. ಇತ್ತ ವೃದ್ಧೆ ಚಂದ್ರವತಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.