Site icon Vistara News

KCET Application Form | ಸಿಇಟಿ ಅರ್ಜಿ ತುಂಬಲು ತರಬೇತಿ; ಪದವಿಪೂರ್ವ ಕಾಲೇಜುಗಳಲ್ಲಿ ಸಹಾಯ ಕೇಂದ್ರ ಸ್ಥಾಪನೆ

KCET Application Form

ಬೆಂಗಳೂರು: ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ(KCET Application Form) ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಜತೆ ಶುಕ್ರವಾರ ಮಹತ್ವದ ಸಭೆ ನಡೆಸಿ ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, ಎಸ್‌ಎಸ್‌ಎಲ್‌ಸಿ ಹಂತದಲ್ಲಿನ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯನ್ನು (ಎಸ್ಎಟಿಎಸ್) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜತೆ ಸಂಯೋಜನೆಗೊಳಿಸುವ ಸಂಬಂಧ ಚರ್ಚಿಸಲಾಯಿತು. ಕೆಇಎ ಕೂಡ ಯಾವ ರೀತಿಯ ಮಾಹಿತಿ ಅಗತ್ಯ ಇದೆ ಎನ್ನುವುದನ್ನು ತಿಳಿಸಲಿದೆ. ಎರಡೂ ಇಲಾಖೆಗಳ ಸಮನ್ವಯದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ | Yoga Education | ಧ್ಯಾನ ಶಾಲೆ, ಪಿಯುಗಳಿಗೆ ಸೀಮಿತವಲ್ಲ, ಕಾಲೇಜು ಕ್ಯಾಂಪಸ್‌ಗಳಿಗೂ ವಿಸ್ತರಿಸಿ ಯುಜಿಸಿ ಆದೇಶ

“ಈಗ ಸಾಕಷ್ಟು ವಿದ್ಯಾರ್ಥಿಗಳು ಸಿಇಟಿ ಅರ್ಜಿಯಲ್ಲಿ ಆರ್.ಡಿ. ಸಂಖ್ಯೆ, ತಂದೆಯ ಹೆಸರು, ಜಾತಿಯ ಹೆಸರು ಇತ್ಯಾದಿಗಳನ್ನು ತಪ್ಪಾಗಿ ದಾಖಲಿಸುತ್ತಿದ್ದಾರೆ. ಇದನ್ನೆಲ್ಲ ಸರಿಪಡಿಸಲು ಏಳೆಂಟು ಬಾರಿ ಅವಕಾಶ ಕೊಡುತ್ತಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿರುವುದರ ಜತೆಗೆ ಉಳಿದ ಪ್ರಕ್ರಿಯೆಗಳು ವಿಳಂಬ ಆಗುತ್ತಿವೆ. ಹೀಗಾಗಿ ಪಿಯುಸಿಯಲ್ಲಿ ಇರುವಾಗಲೇ ಸಿಇಟಿ ಅರ್ಜಿ ತುಂಬಲು ಕಲಿಸುವ ವಿದ್ಯಾರ್ಥಿಸ್ನೇಹಿ ವ್ಯವಸ್ಥೆ ರೂಪಿಸಲಾಗುವುದು” ಎಂದರು.

ಇದಕ್ಕಾಗಿ ಪ್ರತಿ ಕಾಲೇಜಿನಲ್ಲೂ ತಲಾ 100 ವಿದ್ಯಾರ್ಥಿಗಳಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಿಸಲಾಗುವುದು. ಇದರ ಜತೆಗೆ ಒಂದು ಜಿಲ್ಲೆಗೆ ತಲಾ ನಾಲ್ವರು ಮಾಸ್ಟರ್ ಟ್ರೈನರ್‌ಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಸಂಯೋಜಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ತರಬೇತಿ ಕೊಡಲಾಗುವುದು. ಹಾಗೆಯೇ ಮಾಸ್ಟರ್ ಟ್ರೈನರ್‌ಗಳಿಗೆ ಪ್ರಾಧಿಕಾರದಿಂದ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ಹಂತದಲ್ಲಿ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲಾಗುವುದು. ಮೊದಲು ಅಗತ್ಯ ಮಾಹಿತಿ ನೀಡುವಿಕೆ, ಎರಡನೇ ಹಂತದಲ್ಲಿ ಮೀಸಲಾತಿ, ಇದಕ್ಕೆ ಅನ್ವಯವಾಗುವ ಆರ್.ಡಿ. ಸಂಖ್ಯೆ, ಶೈಕ್ಷಣಿಕ ವಿದ್ಯಾರ್ಹತೆ ಕುರಿತು ಅರಿವು ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮೀಸಲಾತಿ ಪ್ರಮಾಣ ಪತ್ರಗಳು, ವಿದ್ಯಾರ್ಥಿ ಮತ್ತು ತಂದೆಯ ಹೆಸರುಗಳು ಸರಿಯಾಗಿ ಇರುವ ಬಗ್ಗೆ ಮಾಹಿತಿ ಕೊಡಲಾಗುವುದು. ಜನವರಿಯಲ್ಲಿ ಅರ್ಜಿ ತುಂಬಲು ಅವಕಾಶ, ಫೆಬ್ರವರಿಯಲ್ಲಿ ಸೀಟು ಹಂಚಿಕೆ, ದಾಖಲಾತಿ ಪರಿಶೀಲನೆ ಮತ್ತು ಇತರ ಪ್ರಕ್ರಿಯೆ ಬಗ್ಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಈಗ ಇರುವ ಎಸ್ಎಟಿ ವ್ಯವಸ್ಥೆಯಲ್ಲಿ ಲಭ್ಯವಾಗುವ ವಿದ್ಯಾರ್ಥಿ ಸಂಬಂಧಿತ ಮಾಹಿತಿ ಅಥವಾ ವಿವರಗಳನ್ನು ಸಿಇಟಿ ಅರ್ಜಿಯಲ್ಲಿ ವಿಲೀನಗೊಳಿಸಲು ಚಿಂತಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ, ಆಡಳಿತಾಧಿಕಾರಿ ಶಿವಕುಮಾರ್ ಇದ್ದರು.

ಇದನ್ನೂ ಓದಿ | Education News | 9 ಮತ್ತು 10ನೇ ತರಗತಿಗಳು ಇನ್ನು ಪ್ರೌಢ ಶಾಲೆಗಳಲ್ಲ; ಪ್ರಾಥಮಿಕ ಶಿಕ್ಷಣದ ಭಾಗ

Exit mobile version