ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಸಿ ಸಾರಿಗೆ ಇಲಾಖೆಯ ನೌಕರರು ಸುವರ್ಣ ಸೌಧದ ಬಳಿಯ ಬಸ್ತಾವಾಡದಲ್ಲಿ ಉಪವಾಸ ಸತ್ಯಾಗ್ರಹ (Transport Workers Protest) ನಡೆಸುತ್ತಿದ್ದಾರೆ. ಸಾರಿಗೆ ಸಚಿವ ಬಿ. ಶ್ರೀರಾಮುಲು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ನೌಕರರ ಮನವೊಲಿಸುವಲ್ಲಿ ವಿಫಲರಾದರು. ಹೀಗಾಗಿ ಸಾರಿಗೆ ಇಲಾಖೆ ನೌಕರರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಮುಷ್ಕರದಲ್ಲಿ ೨೫೦೦ ವಿವಿಧ ಸಾರಿಗೆ ನಿಗಮದ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅವರನ್ನು ಯಾವುದೇ ನಿಬಂಧನೆಗಳಿಲ್ಲದೇ ಮರು ನೇಮಕ ಮಾಡಿಕೊಳ್ಳಬೇಕು. ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು. ಸಾರಿಗೆ ಮುಷ್ಕರದ ಸಮಯದಲ್ಲಿ ನಾಲ್ಕೂ ನಿಗಮದ ಸದಸ್ಯರ ಮೇಲೆ ಹಾಕಿರುವ ಕೇಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ತೂಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಬೇಡಿಕೆ ಈಡೇರಿಸಲು ಒಂದು ತಿಂಗಳು ಕಾಲಾವಕಾಶ ನೀಡಿ, ಎಲ್ಲ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಎಂದು ಹೇಳಿದರು. ಇದಕ್ಕೆ ಸಾರಿಗೆ ನೌಕರರು ಕೇವಲ ಮೌಖಿಕ ಭರವಸೆ ಬೇಡ, ಲಿಖಿತವಾಗಿ ಏನಾದರೂ ಬರೆದು ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ಶ್ರೀರಾಮುಲು ಅಲ್ಲಿಂದ ಹೊರ ನಡೆದರು. ಹೀಗಾಗಿ ಶ್ರೀರಾಮುಲು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಸಾರಿಗೆ ಇಲಾಖೆ ನೌಕರರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪ್ರತಿಕ್ರಿಯಿಸಿ, ವಜಾಗೊಂಡ ನೌಕರರನ್ನು ಯಾವುದೇ ನಿಬಂಧನೆ ಇಲ್ಲದೆ ಮರು ನೇಮಕ ಮಾಡಿಕೊಳ್ಳಬೇಕು, ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು, ಸಾರಿಗೆ ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮದ ಸದಸ್ಯರ ಮೇಲೆ ಹಾಕಿರುವ ಕೇಸ್ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಈ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಮರಾಠಾ ಮೀಸಲಾತಿಗಾಗಿ ಹೋರಾಟ: ಸರ್ಕಾರಕ್ಕೆ ಡಿ.30ರ ಗಡುವು ನೀಡಿದ ಹೋರಾಟಗಾರರು