ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನೌಕರರು ಕಳೆದ ಜನವರಿ 23ರಂದು ಧರಣಿ ಸತ್ಯಾಗ್ರಹ ನಡೆಸಿದ್ದರೂ ಸರ್ಕಾರ ಮಣಿಯದ ಕಾರಣಕ್ಕಾಗಿ (Transport Workers Protest) ಸೋಮವಾರ (ಫೆ.6) ಅನಿರ್ದಿಷ್ಟಾವಧಿ ಧರಣಿಗೆ ಕರೆ ಕೊಟ್ಟಿದ್ದಾರೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಬಸ್ ಸಂಚಾರದಲ್ಲಿ ಯಾವುದೇ ಅಡತಡೆ ಇಲ್ಲದಂತೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ಅನಿರ್ದಿಷ್ಟಾವಧಿ ಧರಣಿ ನಡುವೆಯೂ ಬಸ್‌ಗಳು ಎಂದಿನಂತೆ ಸಂಚರಿಸಲಿವೆ.
ಸಾರಿಗೆ ನೌಕರರ ಬೇಡಿಕೆಗಳೇನು?
– 2020ರ ಜನವರಿ 1 ರಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಬಾಕಿ ಇದ್ದು, ಕೂಡಲೇ ವೇತನ ಹೆಚ್ಚಳ ಮಾಡುವುದು.
-ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರು ನೇಮಕಾತಿ ಮಾಡಿಕೊಳ್ಳುವುದು.
-ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು.
-ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದರ ಜತೆಗೆ ಸರಿಯಾದ ರೀತಿ ಪಿಂಚಣಿ ಸೌಲಭ್ಯವನ್ನು ಒದಗಿಸುವುದು.
-ಸಾರಿಗೆ ಸಂಸ್ಥೆಯ ನೌಕರರಿಗೆ ನಗದು ರಹಿತ ಉತ್ತಮವಾದ ಆರೋಗ್ಯ ಯೋಜನೆಗಳನ್ನು ಒದಗಿಸುವುದು.
ಶಿಸ್ತು ಕ್ರಮದ ಎಚ್ಚರಿಕೆ
ಬಿಎಂಟಿಸಿ, ಕೆಎಸ್ಆರ್‌ಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ನೌಕರರಿಗೆ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಮೌಖಿಕ ಸೂಚನೆ ನೀಡಲಾಗಿದೆ. ವಾರದ ರಜೆ ಹೊರತುಪಡಿಸಿ ಬೇರೆ ಅನಗತ್ಯ ರಜೆಗೆ ಕತ್ತರಿ ಹಾಕಲಾಗಿದೆ. ಕೆಲಸಕ್ಕೆ ಗೈರಾದರೆ ವೇತನ ಕಡಿತದ ಜತೆ ಶಿಸ್ತು ಕ್ರಮ ಜಾರಿ ಮಾಡುವ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: BKS Varma Death News : ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ನಿಧನ
ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ನಿಗಮಗಳಿಂದ ಮೌಖಿಕ ಸೂಚನೆ ನೀಡಲಾಗಿದೆ. ನೌಕರರು ಸತ್ಯಾಗ್ರಹದಲ್ಲಿ ಭಾಗಿಯಾದರೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರಿಗೆ ಅಡಚಣೆಯಾಗಬಾರದೆಂಬ ಈ ಕ್ರಮ ವಹಿಸಲಾಗಿದೆ.