ಬೆಂಗಳೂರು: ವಿಧಾನಸಭಾ ಚುನಾವಣಾ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಕಡೆಗಳಲ್ಲಿ ರೋಡ್ ಶೋಗಳು ನಡೆಯುತ್ತಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರೋಡ್ ಶೋ ಹಿನ್ನೆಲೆಯಲ್ಲಿ ಸುಮಾರು ಎರಡು ಕಿಲೋ ಮೀಟರ್ ಉದ್ದದ ರಸ್ತೆಯ ಪಕ್ಕದಲ್ಲಿರುವ ಮರಗಳ ಕೊಂಬೆ ಕತ್ತರಿಸಿ ರಾಶಿ ಹಾಕಲಾಗಿದೆ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದ್ದು, ಯಾರ ಅನುಮತಿ ಪಡೆದು ಮರಗಳಿಗೆ ಕತ್ತರಿ ಹಾಕಲಾಗಿದೆ? ಎಂದು ಪ್ರಶ್ನಿಸಿದಾಗಲೂ ಉತ್ತರವಿಲ್ಲ. ಈ ಬಗ್ಗೆ ಕಾಂಗ್ರೆಸ್ ವಕ್ತಾರ ಡಾ. ಶಂಕರ್ ಗುಹಾ ಅವರು ಕೆಂಡಾಮಂಡಲವಾಗಿದ್ದು, ಇಂಥ ನಡೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಬಸವನಗುಡಿಯಲ್ಲಿ ಬಿಜೆಪಿಯ ಶಾಸಕ ಹಾಗೂ ಹಾಲಿ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಪರ ಪ್ರಚಾರ ನಡೆಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿ ರೋಡ್ ಶೋ ನಡೆಸುವ ಹಿನ್ನೆಲೆಯಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿರುವ ಮರದ ಹಲವಾರು ಕೊಂಬೆಗಳನ್ನು ಬಿಬಿಎಂಪಿ ಕಾರ್ಮಿಕರು ಕತ್ತರಿಸಿದ್ದಾರೆ. ಇದಕ್ಕೆ ಯಾರ ಅನುಮತಿಯನ್ನು ಪಡೆಯಲಾಗಿದೆ? ಇದು ಅಕ್ಷಮ್ಯ ಎಂದು ಡಾ. ಶಂಕರ್ ಗುಹಾ ದ್ವಾರಕನಾಥ ಖಂಡಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಮಂಡ್ಯದಲ್ಲಿ ಬುಲ್ಡೋಜರ್ ತಂದು ನೆಲಸಮ ಮಾಡ್ತೇನೆ ಅಂದರಾ ಯೋಗಿ?: ಎಚ್.ಡಿ. ಕುಮಾರಸ್ವಾಮಿ
ಇಂತಹ ಬಿರು ಬೇಸಿಗೆಯ ದಿನಗಳಲ್ಲಿ ಮರದ ಕೊಂಬೆಗಳನ್ನು ಕತ್ತರಿಸಿ ಟ್ರ್ಯಾಕ್ಟರ್ ತುಂಬಾ ಲೋಡುಗಟ್ಟಲೇ ಮರದ ಕೊಂಬುಗಳನ್ನು ತುಂಬಲಾಗಿದೆ. ಇದನ್ನು ಗಮನಿಸಿದ ಡಾ. ಶಂಕರ್ ಗುಹಾ ದ್ವಾರಕನಾಥ ಕೆಲಸಗಾರರನ್ನು ತಡೆದಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿದ್ಯಾ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಚುನಾವಣಾ ಪ್ರಚಾರ ನಡೆಸುವ ಸಲುವಾಗಿ ಮರದ ಕೊಂಬೆಯನ್ನು ಕತ್ತರಿಸಲು ಪರವಾನಿಗೆ ಇದೆಯೇ? ಎಂದು ಅವರನ್ನು ಪ್ರಶ್ನಿಸಿದಾಗ ಎಇಇ ವಿದ್ಯಾ ನಿರುತ್ತರರಾದರು. ಇದಕ್ಕೆ ಡಾ. ಶಂಕರ್ ಗುಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಪಿಯವರಿಗೊಂದು ನ್ಯಾಯ, ಜನಸಾಮಾನ್ಯರಿಗೆ ಇನ್ನೊಂದು ನ್ಯಾಯವೇ?
ಮಳೆಗಾಲದಲ್ಲಿ ಜನಸಾಮಾನ್ಯರ ಮನೆಯ ಮುಂದೆ ಮರ ಬಾಗಿ ತೊಂದರೆಯಾದಾಗ ಒಂದು ಕೊಂಬೆಯನ್ನು ಕತ್ತರಿಸಲು ಕೋರ್ಟ್ ಅನುಮತಿ ಬೇಕು. ಹಾಗೆಯೇ ಕತ್ತರಿಸಿದರೆ ಕೇಸ್ ಹಾಕಲಾಗುತ್ತದೆ ಎಂದು ಹೇಳುತ್ತೀರಿ. ಆದರೆ, ಈಗ ರೋಡ್ ಶೋಗಾಗಿ ಹೀಗೆ ಕತ್ತರಿಸಲು ಪರವಾನಿಗೆ ಬೇಡವೇ? ಬಿಜೆಪಿಯವರಿಗೊಂದು ನ್ಯಾಯ, ಜನಸಾಮಾನ್ಯರಿಗೆ ಇನ್ನೊಂದು ನ್ಯಾಯವೇ? ಎಂದು ಡಾ. ಶಂಕರ್ ಗುಹಾ ಪ್ರಶ್ನಿಸಿದ್ದಾರೆ.
ಎಇಇ ತರಾಟೆಗೆ
ಅಲ್ಲದೆ, ಈ ಕುರಿತು ಎಇಇ ವಿದ್ಯಾ ಅವರನ್ನು ತರಾಟೆಗೆ ತೆಗೆದುಕೊಂಡ ಡಾ. ಶಂಕರ್ ಗುಹಾ ಅವರು ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ. ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಬೇಕೇ ಅಥವಾ ರಾಜಕಾರಣಿಗಳಿಗಾಗಿ ಕೆಲಸ ಮಾಡಬೇಕೆ? ಈ ರೀತಿಯ ತೊಂದರೆಗೆ ಹೊಣೆ ಯಾರು? ನಿಮಗೆ ಇದನ್ನು ಕತ್ತರಿಸಲು ಆದೇಶಿಸಿದವರು ಯಾರಾದರೂ ಇಲ್ಲಿಗೆ ಬರುತ್ತಾರೆಯೇ? ಸಂಸದ ತೇಜಸ್ವಿ ಸೂರ್ಯ ಅಥವಾ ಶಾಸಕ ರವಿ ಸುಬ್ರಹ್ಮಣ್ಯ ಇದಕ್ಕೆ ಉತ್ತರ ನೀಡುತ್ತಾರೆಯೇ? ಎಂದು ಕೇಳಿದ್ದಾರೆ.
ಇದನ್ನೂ ಓದಿ: Karnataka Election 2023: ಶೀಘ್ರ ಕಾಂಗ್ರೆಸ್‌ನ 50 ನಾಯಕರ ಮೇಲೆ ಐಟಿ, ಲೋಕಾ ದಾಳಿ: ಲಕ್ಷ್ಮೀ ಹೆಬ್ಬಾಳಕರ್ ಆರೋಪ
ಆರ್‌ಒಗೆ ದೂರು
ಒಂದು ಮರವನ್ನು ಕತ್ತರಿಸುವುದು ಸುಲಭ. ಆದರೆ, ಅದನ್ನು ಬೆಳೆಸುವುದು ಎಷ್ಟು ಕಷ್ಟ ಎನ್ನುವ ಪ್ರಜ್ಞೆ ಇಲ್ಲದ ನಾಯಕರನ್ನು ಪಡೆದಿರುವುದು ಸಮಾಜದ ದುರಂತ. ಇನ್ನು ಮುಂದೆ ಕೊಂಬೆಯನ್ನು ಕಡಿದರೆ ಇವೆಲ್ಲವನ್ನೂ ರವಿ ಸುಬ್ರಹ್ಮಣ್ಯ ಅವರ ಮನೆ ಮುಂದೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಇದಕ್ಕೆ ತಬ್ಬಿಬ್ಬಾದ ವಿದ್ಯಾರವರು ಏನನ್ನೂ ಉತ್ತರಿಸದೆ ಹಾಗೆಯೇ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಒ ಅವರಿಗೆ ದೂರನ್ನು ನೀಡಲಾಗಿದೆ ಎಂದು ಡಾ.ಶಂಕರ್ ಗುಹಾ ತಿಳಿಸಿದ್ದಾರೆ.