ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ(Amrit Mahotsav) ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಧ್ವಜದ ಚಿತ್ರಾಕೃತಿ ಎಲ್ಲರ ಗಮನಸೆಳೆಯುತ್ತಿದೆ. ಬರೋಬ್ಬರಿ 900 ಕೆ.ಜಿ ಧಾನ್ಯ, ೯೦ ಕೆಜಿ ತರಕಾರಿ ಹಾಗೂ ಹೂವುಗಳನ್ನು ಬಳಸಿದ್ದು, ಒಟ್ಟಾರೆ ಸಾವಿರ ಕೆ.ಜಿ ವಸ್ತುಗಳಿಂದ ಇದನ್ನು ರಚಿಸಿರುವುದು ದಾಖಲೆಯಾಗಿದೆ.
ಕಲಾವಿದ ಹಾಗೂ ಛಾಯಾಗ್ರಾಹಕ ಪುನಿಕ್ ಶೆಟ್ಟಿ ಅವರ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ 30 ಸದಸ್ಯರು ಸೇರಿ 38 ಅಡಿ ವೃತ್ತದಲ್ಲಿ ಈ ವಿಶಿಷ್ಟ ರಚನೆಯನ್ನು ನಿರ್ಮಿಸಿದ್ದಾರೆ. 300 ಕೆ.ಜಿ ಸಬ್ಬಕ್ಕಿ, 300 ಕೆ.ಜಿ ಹೆಸರುಕಾಳು, 300 ಕೆ.ಜಿ ಕೆಂಪು ತೊಗರಿ ಬಳಸಿ ಒಟ್ಟು 900 ಕೆ.ಜಿ ಧಾನ್ಯ ಹಾಗೂ ೯೦ ಕೆಜಿ ತರಕಾರಿ ಹೂವುಗಳನ್ನು ಬಳಸಲಾಗಿದೆ. ಜತೆಗೆ ಸಬ್ಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಸೇರಿಸಿ ಸುಮಾರು 54 ಕಳಸವಿಟ್ಟು ಅಲಂಕರಿಸಿದ ಸುಂದರ ವಿಭಿನ್ನ ಶೈಲಿಯ ಈ ತಿರಂಗಾ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ | Amrit Mahotsav | ಬೆಂಗಳೂರಿನಲ್ಲಿ ಬಿಗಿ ಭದ್ರತೆ, ಚಾಮರಾಜಪೇಟೆ ಮೈದಾನಕ್ಕೆ ಡ್ರೋನ್ ಕಾವಲು
ಈ ಕಲಾಸೊಬಗಿಗೆ 108 ಬಾಳೆ ಎಲೆಯನ್ನೂ ಉಪಯೋಗಿಸಿ ಎಲ್ಲರ ಚಿತ್ತ ಅದರತ್ತ ಆಕರ್ಷಿಸುವಂತೆ ಮಾಡಲಾಗಿದೆ. ಅಲ್ಲದೆ, ಚಿತ್ರಾಕೃತಿಗೆ ಉಪಯೋಗಿಸಿದ ಚೆಂಡು ಹೂ ಮತ್ತಷ್ಟು ಮೆರುಗು ನೀಡುತ್ತಿದೆ. ಅಂತೆಯೇ
18 ಗಂಟೆಗಳ ಶ್ರಮ: ಪೂಜಾರಿ ಮೆಚ್ಚುಗೆ!
ತಿರಂಗಾ ಕಲಾಕೃತಿಯನ್ನು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಉದ್ಘಾಟನೆ ಮಾಡಿದರು. ಕುದ್ರೋಳಿ ದೇವಸ್ಥಾನದ ನವೀಕರಣದ ರೂವಾರಿಯೂ ಆಗಿರುವ ಪೂಜಾರಿ ಅವರು, ಯುವಕರ ತಂಡದ ಈ ಕಾರ್ಯವನ್ನು ಶ್ಲಾಘಿಸಿದರು. ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ನಿರಂತರ ಶ್ರಮ ಬಳಸಿ ಈ ತಿರಂಗಾ ಕಲಾಕೃತಿ ರಚಿಸಲಾಗಿದೆ. ಇದರ ಅಡಿ ಭಾಗದಲ್ಲಿ ಮೂರು ಬಣ್ಣಗಳ ಬಟ್ಟೆಯನ್ನು ಹಾಸಲಾಗಿದೆ. ಸದ್ಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ತಿರಂಗಾ ಕಲಾಕೃತಿ ಆಕರ್ಷಣೆಯ ಕೇಂದ್ರವಾಗಿದ್ದು, ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.
ಇದನ್ನೂ ಓದಿ | Amrit Mahotsav | ಬ್ರಿಟಿಷರ ದಾಸ್ಯ ಬಯಸದೇ ಹುತಾತ್ಮನಾದ ಸುರಪುರದ ವೀರ ಚಿಕ್ಕವೆಂಕಟಪ್ಪ ನಾಯಕ