ತುಮಕೂರು: ಶಿಕ್ಷಣ ಸಚಿವರಾಗಿರುವ ಬಿ.ಸಿ. ನಾಗೇಶ್ ಅವರು ರಾಜ್ಯದಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆಗೆ ಪಣ ತೊಟ್ಟಿರುವುದು ನಿಜವಾದರೂ ಅವರ ತವರು ಜಿಲ್ಲೆಯ ಶಾಲೆಯಲ್ಲೇ ಶೌಚಾಲಯವಿಲ್ಲ. ಇದರಿಂದಾಗಿ ಮಕ್ಕಳು ಪರದಾಡುತ್ತಿದ್ದಾರೆ. ಶಿಕ್ಷಣ ಸಚಿವರೇನೋ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳೇ ಅವರ ಮಾತು ಕೇಳ್ತಿಲ್ಲ ಎಂದು ಪೋಷಕರು ದೂರಿದ್ದಾರೆ.
ಗುಬ್ಬಿ ತಾಲೂಕಿನ ಕೋಡಿಹಳ್ಳಿ ಸರ್ಕಾರಿ ಶಾಲೆಯ ಸಮಸ್ಯೆ ಇದು. ಇಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಪೋಷಕರ ಬಳಿ ಮಕ್ಕಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಆತಂಕಕಾರಿ ಸಂಗತಿ ಎಂದರೆ ಈ ಶಾಲೆಯ ಹೆಣ್ಣು ಮಕ್ಕಳು ಕೂಡಾ ಬಹಿರಂಗ ಶೌಚಕ್ಕೆ ಹೋಗಬೇಕಾದ ಸ್ಥಿತಿ ಇದೆ. ಬಯಲು ಶೌಚವನ್ನು ದೇಶದೆಲ್ಲೆಡೆ ನಿರ್ಬಂಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶಯ ಹೊಂದಿದ್ದರೂ ನೂರಾರು ಹೆಣ್ಮಕ್ಕಳು ಓದುವ ಶಾಲೆಗಳಲ್ಲೇ ಶೌಚಾಲಯ ಇಲ್ಲದ ಸ್ಥಿತಿ ಇರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ.
ಈ ನಡುವೆ, ಪೋಷಕರಲ್ಲಿ ಒಬ್ಬರಾ ಚಿಕ್ಕೆಗೌಡ ಈ ಹಿಂದೆ ಶಿಕ್ಷಣ ಸಚಿವರ ಗಮನಕ್ಕೆ ಕೂಡ ತಂದಿದ್ದರು. ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದರು. ಸಂವಾದದ ವೇಳೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಬಿ.ಇ.ಒ.ಸೋಮಶೇಖರ್ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚನೆಯನ್ನು ನೀಡಿದ್ದರು.
ಇದನ್ನೂ ಓದಿ | ಪಠ್ಯ ಕೈಬಿಟ್ಟಿರುವ ಬಗ್ಗೆ ಶಿಕ್ಷಣ ಸಚಿವರಿಂದ ತಪ್ಪು ಮಾಹಿತಿ: ಬರಗೂರು ಆರೋಪ
ಅಷ್ಟೇ ಅಲ್ಲ ಸಚಿವರು ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನೂ ಬಿಡುಗಡೆ ಮಾಡಿದ್ದರು. ಆದರೂ ನಾಲ್ಕು ತಿಂಗಳು ಕಳೆದರೂ ಶೌಚಾಲಯ ನಿರ್ಮಾಣ ಮಾಡದೇ ಬಿ.ಇ.ಒ.ಸೋಮಶೇಖರ್ ಬೇಜವಾಬ್ದಾರಿ ತನವನ್ನು ತೋರಿಸಿದ್ದಾರೆ ಎಂದು ಪೋಷಕರು ಆಪಾದಿಸಿದ್ದಾರೆ. ಜತೆಗೆ ಗ್ರಾಮದ ಇತರರೂ ಇದೀಗ ಬಿಇಒ ವಿರುದ್ಧ ಸಿಡಿದೆದ್ದಿದ್ದಾರೆ.
ಇದನ್ನೂ ಓದಿ | ರಸ್ತೆ ಬದಿಯ ಹೋಟೆಲ್‌ನಲ್ಲಿ ತಿಂಡಿ, ಚಹಾ ಸೇವಿಸಿ ಸರಳತೆ ಮೆರೆದ ಶಿಕ್ಷಣ ಸಚಿವ ನಾಗೇಶ್