ಪಾವಗಡ: ರಾಜ್ಯಾದ್ಯಂತ ಶನಿವಾರದಂದು ನವೋದಯ ಪರೀಕ್ಷೆ ನಡೆದಿದೆ. ವರ್ಷಕ್ಕೆ ಒಮ್ಮೆ ನಡೆಯುವ ಈ ಪರೀಕ್ಷೆಯಲ್ಲಿ ಮೇಲ್ವಿಚಾರಣೆಗೆಂದು ಬಂದಿದ್ದ ಶಿಕ್ಷಕರೇ ಮೋಸ ಮಾಡಿದ್ದಾರೆ ಎನ್ನುವ ದೂರು ಪಾವಗಡದಲ್ಲಿ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು (Pavagada News) ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಪಾವಗಡ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ನವೋದಯ ಪರೀಕ್ಷೆ ನಡೆಸಲಾಗಿದೆ. ನವೋದಯ ಕೇಂದ್ರ ವಿದ್ಯಾಲಯದ ಪ್ರವೇಶಾತಿಗೆಂದು ನಡೆಸಿದ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 289 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 34 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಹೀಗಿರುವಾಗ ಪರೀಕ್ಷೆ ವೇಳೆ ಸಾಕಷ್ಟು ತಾರತಮ್ಯವಾಗಿದೆ. ಮೇಲ್ವಿಚಾರಕರು ಕೆಲವು ಮಕ್ಕಳಿಗೆ ಪರೀಕ್ಷೆ ಬರೆಯಲು ಉತ್ತರಗಳನ್ನು ಹೇಳಿಕೊಟ್ಟು ಸಹಾಯ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ.
ನವೋದಯ ಕೇಂದ್ರದಲ್ಲಿ ಪಾವಗಡ ತಾಲೂಕಿಗೆ ಕೇವಲ ಎಂಟು ಸೀಟು ಕೊಡಲಾಗಿದೆ. ಆದರೆ ತಾಲೂಕಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 486 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇಷ್ಟೊಂದು ಸ್ಪರ್ಧೆಯಿರುವ ಪರೀಕ್ಷೆಯಲ್ಲಿ ಮೇಲ್ವಿಚಾರಕರು ಈ ರೀತಿಯಲ್ಲಿ ಮೋಸ ಮಾಡಿದರೆ ಬಡ ಮಕ್ಕಳ ಪಾಡೇನು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Navodaya School: ಕೈಕೊಟ್ಟ ನವೋದಯ ಶಾಲಾ ವೆಬ್‌ಸೈಟ್; ಅರ್ಜಿ ಸಲ್ಲಿಸಲು ಆಗದೆ ವಿದ್ಯಾರ್ಥಿಗಳು ಕಂಗಾಲು
ನವೋದಯ ಪರೀಕ್ಷೆ ಬರೆದ ಕೆಲ ಮಕ್ಕಳ ಪೋಷಕರು ಹಾಗೂ ಪರೀಕ್ಷೆ ಕೇಂದ್ರದ ಅಧಿಕಾರಿಗಳು ಮೊದಲೇ ಲಕ್ಷಾಂತರ ರೂಪಾಯಿಯ ಡೀಲ್ ಮಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಮೇಲ್ವಿಚಾರಕರು ಪರೀಕ್ಷೆ ಬರೆಯುವುದಕ್ಕೆ ಸಹಾಯ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶನಿವಾರ ನಡೆದಿರುವ ಪರೀಕ್ಷೆಯನ್ನು ಮತ್ತೆ ಮರುಪರೀಕ್ಷೆ ಮಾಡಲೇಬೇಕು. ಇಲ್ಲವಾದರೆ ಪರೀಕ್ಷೆ ನಡೆಸಿದ ಮುಖ್ಯಸ್ಥರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ಮಕ್ಕಳ ಪೋಷಕರು ತಿಳಿಸಿದರು. ಈ ವೇಳೆ ಪೋಷಕರಾದ ರಮೇಶ್, ವಾಣಿ, ಸುಬ್ಬರಾಯಪ್ಪ, ಸೋಮಶೇಖರ್, ಸೌಮ್ಯ, ಮಹೇಶ್, ವೆಂಕಪ್ಪ, ಲಲಿತ ಸೇರಿ ಅನೇಕ ಮಂದಿ ಪೋಷಕರು ಮತ್ತು ಮಕ್ಕಳು ಪರೀಕ್ಷೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.