ತುಮಕೂರು: ಮಳೆಯಿಂದ ತೇವಗೊಂಡಿದ್ದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹೋಟೆಲ್ ಒಂದು ಭಸ್ಮವಾದ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ.
ಗುಬ್ಬಿಯ ತಾಲೂಕು ಕಚೇರಿಯ ಮುಂಭಾಗದಲ್ಲಿದ್ದ ಗೌರಮ್ಮ ಹೋಟೆಲ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಇದ್ದಕ್ಕಿದ್ದಂತೆಯೇ ಈ ಬೆಂಕಿ ಹೋಟೆಲ್ ಅನ್ನು ಆವರಿಸಿಕೊಂಡಿದ್ದು, ಒಳಗಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ. ಸಾವಿರಾರು ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿ, ಅಡುಗೆ ಪದಾರ್ಥಗಳು, ಪ್ರಿಡ್ಜ್, ಪಾತ್ರೆಗಳು ಸುಟ್ಟು ಹೋಗಿವೆ. ಸುಮಾರು 10 ಲಕ್ಷ ರೂಪಾಯಿ ನಷ್ಟವಾಗಿರಬಹುದೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ಆರಿಸಿದರು. ಆದರೂ ನಷ್ಟ ತಪ್ಪಿಸಲಾಗಿಲ್ಲ. ಆದರೆ ಬೆಂಕಿಯು ಬೇರೆಡೆ ಹರಡುವ ಅಪಾಯವನ್ನು ತಪ್ಪಿಸಲಾಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹುಲ್ಲಿನ ಬಣವೆಗೆ ಬೆಂಕಿ
ಮಳೆಯಿಂದಾಗಿ ಕಟ್ಟಡ ತೇವಗೊಂಡಿದ್ದರಿಂದ ಈ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಬೆಸ್ಕಾಂಗೆ ಮಾಹಿತಿ ನೀಡಿದರೂ ಸಿಬ್ಬಂದಿ ಸಕಾಲದಲ್ಲಿ ಸ್ಥಳಕ್ಕೆ ಹಾಜರಾಗಿರಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ದೂರಿದ್ದಾರೆ. ಮಧ್ಯರಾತ್ರಿ ಅನಾಹುತ ಸಂಭವಿಸಿದ್ದರಿಂದ ಜೀವ ಹಾನಿಯಾಗಿಲ್ಲ.
ಮಂಜುನಾಥ್ ಎನ್ನುವವರಿಗೆ ಸೇರಿದ ಹೋಟೆಲ್ ಇದಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪಂಚಾಯತ್‌ನ ಸದಸ್ಯರು, ಹೋಟೆಲ್ ಮಾಲಿಕರ ಸಂಘದ ಪದಾಧಿಕಾರಿಗಳು ಕೂಡ ಭೇಟಿ ನೀಡಿದ್ದರು.
ಇದನ್ನೂ ಓದಿ| ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ