ಗುಬ್ಬಿ: ತಮಿಳುನಾಡಿಗೆ ಕಾವೇರಿ ನೀರನ್ನು (Cauvery Water) ಹರಿಸುವುದನ್ನು ವಿರೋಧಿಸಿ ಗುಬ್ಬಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಸಂಘಟನೆಗಳು ಸಂಪೂರ್ಣವಾಗಿ ಗುಬ್ಬಿಯನ್ನು ಬಂದ್ (Gubbi Bandh) ಮಾಡುವುದಕ್ಕೆ ಬೆಂಬಲ ಸೂಚಿಸಿವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗಗಳಲ್ಲಿ ಈಗಾಗಲೇ ಪ್ರತಿಭಟನೆ ಹಾಗೂ ಬಂದ್ ಗಳನ್ನು ಮಾಡಲಾಗಿದೆ, ಅದೇ ರೀತಿಯಲ್ಲಿ ರಾಜ್ಯಾದ್ಯಂತ ಸೆ. 29ಕ್ಕೆ ಕರೆದಿರುವ ಕರ್ನಾಟಕ ಬಂದ್‌ಗೂ ಸಹ ಎಲ್ಲ ಸಂಘಟನೆಗಳು ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ಸಹ ಇದರಲ್ಲಿ ಭಾಗಿಯಾಗುವ ಮೂಲಕ ನಮ್ಮ ನೀರನ್ನು ನಾವು ಉಳಿಸಿಕೊಳ್ಳುವ ಮೂಲಕ ರಾಜ್ಯವನ್ನು ಉಳಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ತಮಿಳುನಾಡಿಗೆ ನೀರು ಹರಿಸಲು ಅಸಾಧ್ಯ ಎಂಬ ರಾಜ್ಯ ಸರ್ಕಾರದ ವಾದವನ್ನು ಮತ್ತೆ ನಿರ್ಲಕ್ಷಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಸೆ. 28ರಿಂದ ಆಗಸ್ಟ್ 15 ರವರೆಗೆ 3000 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ, ಖಂಡಿತವಾಗಿಯೂ ಇದು ಅವೈಜ್ಞಾನಿಕವಾದ ವಿಚಾರವಾಗಿದ್ದು, ಇಡೀ ರಾಜ್ಯದಲ್ಲಿ ಕಾವೇರಿ ನದಿಯನ್ನು ನಂಬಿಕೊಂಡಿರುವ ರೈತರ ಪಾಡು ಏನಾಗಬೇಕು? ಇದನ್ನು ಅರ್ಥ ಮಾಡಿಕೊಳ್ಳದ ಕಾವೇರಿ ನಿಯಂತ್ರಣ ಸಮಿತಿ ಇದರ ಬಗ್ಗೆ ವಾಸ್ತವ ಅರಿತು ಕೂಡಲೇ ನೀರು ನಿಲ್ಲಿಸುವಂತೆ ಆಜ್ಞೆ ಮಾಡದೇ ಇದ್ದರೆ ದೊಡ್ಡ ಮಟ್ಟದ ಹೋರಾಟ ರಾಜ್ಯದಲ್ಲಿ ನಡೆಯುವುದು ನಿಶ್ಚಿತ.
ಇದನ್ನೂ ಓದಿ: Festive Earrings Trend: ಫೆಸ್ಟಿವ್ ಸೀಸನ್ ಗ್ರ್ಯಾಂಡ್ ಲುಕ್‌ಗೆ ಬಂತು ಜಗಮಗಿಸುವ 5 ಆಕರ್ಷಕ ಇಯರಿಂಗ್ಸ್
ತಮಿಳುನಾಡಿಗೆ ಎರಡನೇ ಅವಧಿಗೆ ಬೆಳೆ ಬೆಳೆಯಲು ನೀರು ಬಿಡಲು ಮುಂದಾಗಿದೆ, ಇಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಇರುವಾಗ ಅಲ್ಲಿಗೆ ನೀರು ಬಿಡಲು ಅಸಾಧ್ಯ ಎಂದು ಕಿಡಿಕಾರಿದರು.
ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಗುಬ್ಬಿ ತಾಲೂಕಿನ ಅಂಗಡಿ, ಮುಂಗಟ್ಟುಗಳು, ಶಾಲಾ ಕಾಲೇಜುಗಳು, ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ಬಂದ್ ಮಾಡಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ, ಗುಬ್ಬಿಯ ಗೋಸಲ ಚನ್ನಬಸವೇಶ್ವರ ಸ್ವಾಮಿ ಆವರಣದಿಂದ ಕೋರ್ಟ್ ವರೆಗೆ ಮೆರವಣಿಗೆ ಮೂಲಕ ಆಗಮಿಸಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಹೋರಾಟ ಮಾಡುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ರೈತ ಬಾಂಧವರು, ವರ್ತಕರು, ಸಾರ್ವಜನಿಕರು ಪ್ರತಿಯೊಬ್ಬರು ಆಗಮಿಸಿ ಬಂದ್ ಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಲೋಕೇಶ್, ಚನ್ನಬಸವಣ್ಣ, ಜಗದೀಶ್ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ವಿಜಯ್ ಕುಮಾರ್, ಶಂಕರ್, ಗಂಗಣ್ಣ, ಈಶ್ವರಯ್ಯ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.