Site icon Vistara News

Gubbi News: ಮತದಾನದ ಅರಿವು ಮೂಡಿಸಲು ತಾಪಂನಿಂದ ಬೈಕ್‌ ಜಾಥಾ

#image_title

ಗುಬ್ಬಿ : ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶನಿವಾರದಂದು ಬೈಕ್‌ ಜಾಥಾವನ್ನು ನಡೆಸಿ ಅರಿವು ಮೂಡಿಸುವ ಯತ್ನ ಮಾಡಲಾಗಿದೆ.

“ಕಳೆದ ಬಾರಿಯ ವಿಧಾನಸಭಾ ಚುನಾವಣೆ ಗಮನಿಸಿದರೆ ಮತದಾನದ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಹಾಗಾಗಿ ಈ ಬಾರಿ ಮತದಾರರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಈ ಬೈಕ್ ಜಾಥಾವನ್ನು ಆಯೋಜಿಸಲಾಗಿದೆ” ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: Karnataka Election: ಗುಬ್ಬಿ ಜೆಡಿಎಸ್‌ ಶಾಸಕ ಶ್ರೀನಿವಾಸ್ ರಾಜೀನಾಮೆ ಅಂಗೀಕಾರ

ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಚೇರಿಯಿಂದ ಆರಂಭವಾದ ಬೈಕ್ ಜಾಥಾವು ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಬಿದರೆ ಹಾಗೂ ಇರಕಸಂದ್ರ ಗ್ರಾಮ ಪಂಚಾಯಿತಿಗಳ ಮೂಲಕ ಚೇಳೂರು ಗ್ರಾಮ ಪಂಚಾಯಿತಿ ಕಚೇರಿವರೆಗೂ ಸಾಗಿ ಎಪಿಎಂಸಿ ಆವರಣದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್, “ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇಕಡಾ 100ರಷ್ಟು ಮತದಾನ ಆಗಬೇಕು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವ್ಯಾಪಕ ಪ್ರಚಾರವನ್ನು ನೀಡುವುದರ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಬೇಕು. ಎಲ್ಲ ಗ್ರಾಮ ಪಂಚಾಯಿತಿಯ ಎಲ್ಲ ಹಳ್ಳಿಗಳಲ್ಲಿಯೂ ಸಹ ಸ್ವಚ್ಛ ವಾಹಿನಿ ವಾಹನದ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಪ್ರತಿನಿತ್ಯ ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಹೆಚ್ಚಿನ ಅರಿವು ಮೂಡಿಸುತ್ತಿದ್ದೇವೆ” ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿಗಳಾದ ಡಾ. ಬಿಂದು ಮಾಧವ ಮಾತನಾಡಿ, “ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತ ಚಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹ ಹೆಚ್ಚು ಶ್ರಮವಹಿಸಿ ಕೆಲಸ ನಿರ್ವಹಿಸಬೇಕು” ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಇದನ್ನೂ ಓದಿ: ‌Karnataka Congress: ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ರಾಜೀನಾಮೆ: ಸಿದ್ದರಾಮಯ್ಯ ಜತೆಗೆ ಮಾತುಕತೆ

ಈ ಜಾಗೃತಿ ಬೈಕ್‌ ಜಾಥಾ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕಿನ ಸ್ವೀಪ್ ನೋಡಲ್ ಅಧಿಕಾರಿ ಸುಮನಾ, ತುಮಕೂರು ಜಿಲ್ಲಾ ಪಂಚಾಯಿತಿ ಸ್ವೀಪ್ ಸಮಿತಿ ಸಹಾಯಕ ನೋಡಲ್ ಅಧಿಕಾರಿ ಶ್ರೀನಿವಾಸ್, ಹಾಗೂ ಸಹಾಯಕ ನಿರ್ದೇಶಕ ಇಂದ್ರೇಶ್ ಜೆ ಹೆಚ್ (ಗ್ರಾ. ಉ), ಸಹಾಯಕ ಲೆಕ್ಕಾಧಿಕಾರಿ ಶೋಭಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ನರೇಗಾ ಸಿಬ್ಬಂದಿ ವರ್ಗದವರು, ಹಾಗೂ ಕೊರಟಗೆರೆ ತಾಲೂಕು ಐಇಸಿ ಸಂಯೋಜಕರು ಭಾಗವಹಿಸಿದ್ದರು.

Exit mobile version