ಪಾವಗಡ: ವಿಧಾನಸಭಾ ಚುನಾವಣೆಗೆ ದಿನಗಣನೆ (Karnataka Election) ಆರಂಭವಾಗಿರುವ ಬೆನ್ನಲ್ಲೇ ಎಲ್ಲೆಡೆ ಪಕ್ಷಾಂತರವೂ ಹೆಚ್ಚಾಗಿದೆ. ಅದೇ ರೀತಿ ಪಾವಗಡದ ಬಿಜೆಪಿ ನಾಯಕರಾದ ವಾಲ್ಯನಾಯ್ಕ ಮತ್ತು ಜೆಡಿಎಸ್ ನಾಯಕರಾದ ಪೊಮ್ಯನಾಯ್ಕ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ವೆಂಕಟರಮಣಪ್ಪ ಅವರು ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
ಪಕ್ಷಾಂತರಗೊಂಡ ಬಿಜೆಪಿಯ ವಾಲ್ಯನಾಯ್ಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, “ನಾನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ರಾಜಕೀಯವಾಗಿ ಬೆಳದಿದ್ದೆ. ಆದರೆ ಕೆಲ ವಿಚಾರವಾಗಿ ಬೇಸರಗೊಂಡು ಪಕ್ಷ ತೊರೆದು ಹೋಗಿದ್ದೆ. ಅದರೆ ಈ ಭಾಗದಲ್ಲಿ ಶಾಸಕರಾದ ವೆಂಕಟರಮಣಪ್ಪರವರ ಕಾರ್ಯವೈಖರಿ ನೋಡಿ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದೇನೆ. ಇಂದು ನಮ್ಮೊಂದಿಗೆ ಇಪ್ಪತ್ತರಿಂದ ಮೂವತ್ತು ನನ್ನ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ನಾವು ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಗೆಲುವಿಗೆ ಶ್ರಮಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: Karnataka Election: ಡಿಕೆಶಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಪಾವಗಡ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ. ವೆಂಕಟೇಶ್
ನಂತರ ಪೊಮ್ಯ ನಾಯ್ಕ್ ಮಾತನಾಡಿ, “ನಾನು ನಾಗಲಮಡಿಕೆಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ. ಇಂದು ಶಾಸಕರ ನೇತೃತ್ವದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಮೊದಲಿಂದಲೂ ವೆಂಕಟರಮಣಪ್ಪ ಮತ್ತು ಮಗ ವೆಂಕಟೇಶ್ ಕಾರ್ಯವೈಖರಿ ಗಮನಿಸುತ್ತ ಬಂದಿದ್ದೇನೆ. ಹಾಗಾಗಿ ಸೋಮವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಶ್ರೀರಂಗಪುರ ಗ್ರಾಮದ ಅನೇಕ ಜನ ಕಾಂಗ್ರೆಸ್ ಸೇರಲಿದ್ದಾರೆ” ಎಂದು ತಿಳಿಸಿದರು. ಈ ವೇಳೆ ಕಾಂಗ್ರೆಸ್ ನಗರ ಅಧ್ಯಕ್ಷ ಸುರೇಶ್ ಬಾಬು ಅವರು ಉಪಸ್ಥಿತರಿದ್ದರು.