ತುಮಕೂರು: ಕಲ್ಪಾಮೃತ ಫುಡ್ ಆ್ಯಂಡ್ ಬೆವರೇಜಸ್ ಪ್ರೈ.ಲಿ. (Kalpamrutha Food and Beverages) ಸಂಸ್ಥೆಯಿಂದ ನವೆಂಬರ್ 28ರಂದು ಕಲ್ಪಾಮೃತ ನೂತನ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕ ಪ್ರಾರಂಭೋತ್ಸವ, ಮಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೆ.ಬಿ. ಕ್ರಾಸ್ ರಸ್ತೆಯ ಮುನಿಯೂರು ಗೇಟ್ ಬಳಿಯ ಕಲ್ಪಾಮೃತ ಫುಡ್ & ಬೆವರೇಜಸ್ ಪ್ರೈ.ಲಿ. (ಕೆಎಫ್‌ಬಿ) ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಮಧ್ಯಾಹ್ನ 1.30ಕ್ಕೆ ಕಲ್ಪಾಮೃತ ಸಂಸ್ಥೆಯ ನೂತನ ಉತ್ಪಾದನಾ ಘಟಕವನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭ ಮಾಡುವ ಉದ್ದೇಶದಿಂದ ತುರುವೇಕೆರೆ ತಾಲೂಕಿನ ಮುನಿಯೂರು ಅಂಚೆ ಎಂ. ಗಂಗನಹಳ್ಳಿ ಗ್ರಾಮದಲ್ಲಿ ಶಂಕುಸ್ಥಾಪನೆ ನಡೆಯಲಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಮುನಿಯೂರು ಗೇಟ್ ಬಳಿಯ ಕೆಎಫ್‌ಬಿ ಆವರಣದಲ್ಲಿ ಕಲ್ಪಾಮೃತ ನೂತನ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕ ಪ್ರಾರಂಭೋತ್ಸವ ಮತ್ತು ಮಳಿಗೆ ಉದ್ಘಾಟನೆಯಾಗಲಿದೆ.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಉಬುಂಟು ಕನ್ಸೋರ್ಟಿಯಂ ಸ್ಥಾಪಕ ಅಧ್ಯಕ್ಷರಾದ ಕೆ. ರತ್ನಪ್ರಭಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್. ಬಸವರಾಜ್, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಜಿಲ್ಲಾಧಿಕಾರಿ ಶ್ರೀನಿವಾಸ ಕೆ., ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಜಿ.ಎಂ. ಗಂಗಾಧರ ಸ್ವಾಮಿ, ಮಾಜಿ ಶಾಸಕ ಜಯರಾಮ ಎ.ಎಸ್. ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Job Alert: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ
ಕಲ್ಪಾಮೃತ ಫುಡ್ ಆ್ಯಂಡ್ ಬೆವರೇಜನ್ ಪ್ರೈವೇಟ್ ಲಿಮಿಟೆಡ್ ಗೌರವ ಸಲಹೆಗಾರರು ಮತ್ತು ಮಾರ್ಗದರ್ಶಕ ಎಂ.ಬಿ. ಸಿದ್ಧಬಸಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥಾಪಕರು ಮತ್ತು ಸಿಇಒ ದಿವ್ಯ ಎಂ.ಬಿ., ನಿರ್ದೇಶಕರಾದ ಪ್ರೇಮಾ ಸಿದ್ದಬಸಪ್ಪ ಉಪಸ್ಥಿತರಿರಲಿದ್ದಾರೆ.
ಕಲ್ಪತರು ನಾಡಿನ ಕಲ್ಪಾಮೃತ ಫುಡ್ & ಬೆವರೇಜಸ್ ಪ್ರೈ.ಲಿ. ಸಂಸ್ಥೆಯು ಸಾಂಪ್ರದಾಯಿಕ ಗಾಣಗಳನ್ನು ಬಳಸಿ ಶುದ್ಧ ಕೊಬ್ಬರಿ, ಕಡಲೇಕಾಯಿ ಬೀಜಗಳಿಂದ ತಯಾರಿಸಿದ ಎಣ್ಣೆ ಹಾಗೂ ಕಲ್ಪತರು ನಾಡಿನ ತೆಂಗಿನಿಂದ ತಯಾರಿಸಿದ ವಿಶೇಷ ಸಿಹಿ ತಿನಿಸುಗಳನ್ನು ಗ್ರಾಹಕರಿಗೆ ಪೂರೈಸಲು ಮುಂದಾಗಿದೆ.
ಇದನ್ನೂ ಓದಿ | Job Alert: ಉದ್ಯೋಗ ಹುಡುಕುತ್ತಿರುವವರಿಗೆ ಗುಡ್‌ನ್ಯೂಸ್; ಸಿಐಎಸ್‌ಎಫ್‌ನಲ್ಲಿದೆ 11,025 ಹುದ್ದೆ
ತುರುವೇಕೆರೆ ಸ್ವ-ಸಹಾಯ ಸಂಘ ಹಾಗೂ ಮಹಿಳಾ ಉದ್ಯಮಿಗಳ ಜಾಗತಿಕ ವೇದಿಕೆ ʼಉಬುಂಟುʼ ಸದಸ್ಯರಾಗಿರುವ ದಿವ್ಯ ಎಂ.ಬಿ. ಅವರು ಯುವ ಮಹಿಳಾ ಉದ್ಯಮಿಯಾಗಿ ಈ ಬಹುದೊಡ್ಡ ಯೋಜನೆಯ ಪ್ರಾರಂಭದಲ್ಲಿ ಜಿನಿವಾದಿಂದ ಐ.ಎಫ್.ಆರ್.ಸಿ. (ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ)ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸೀಡ್ ಮನಿಯನ್ನು ಪಡೆದ ಕರ್ನಾಟಕ ಮೂಲದ ಮಹಿಳಾ ಪ್ರತಿನಿಧಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಬೇಕಾಗಿ ಕಂಪನಿಯ ಆಡಳಿತ ಮಂಡಳಿ ಕೋರಿದೆ.