ಗುಬ್ಬಿ: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಮತದಾನದ ಬಗ್ಗೆ ಎಲ್ಲೆಡೆ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಅದೇ ರೀತಿಯಲ್ಲಿ ತುಮಕೂರಿನ ಗುಬ್ಬಿ ತಾಲೂಕಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ರಂಗೋಲಿ ಕಾರ್ಯಕ್ರಮ ನಡೆಸುವ ಮೂಲಕ ಮತದಾನದ ಬಗ್ಗೆ ಅರಿವು (Karnataka Election) ಮೂಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ ಮತ್ತು ಹಲವು ಸ್ವಸಹಾಯ ಸಂಘದ ಮಹಿಳೆಯರು ಆಗಮಿಸಿ ಅಂದ ಚಂದದ ರಂಗೋಲಿಯನ್ನು ಬಿಡಿಸಿ ಅದರ ಮುಖೇನ ಪ್ರತಿಯೊಬ್ಬರೂ ಕೂಡ ಮತದಾನವನ್ನು ಮಾಡಬೇಕು ಎಂಬ ಜಾಗೃತಿಯನ್ನು ಸಾರಿದರು.
ಈ ವೇಳೆ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಕುಮಾರ್, “ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಮತದಾನವನ್ನು ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಸ್ವೀಪ್ ಕಮಿಟಿಯಿಂದ ಹಲವು ರೀತಿಯ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election: ದುಬಾರಿ ಹೇಳಿಕೆ ನೀಡಿ ಪಕ್ಷಕ್ಕೆ ಘಾಸಿ ಮಾಡದಂತೆ ನಾಯಕರಿಗೆ ‘ಕಾಂಗ್ರೆಸ್ ಥಿಂಕ್ ಟ್ಯಾಂಕ್’ ತಾಕೀತು
ಗ್ರಾಮ ಪಂಚಾಯಿತಿ ಸಿಬ್ಬಂದಿ ಸರೋಜ ಮಾತನಾಡಿ, “ನಾವು ಗ್ರಾಮ ಪಂಚಾಯಿತಿಯಿಂದ ಆಗಮಿಸಿ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ರಂಗೋಲಿಯನ್ನು ನೋಡಲು ನೂರಾರು ಜನರು ಇಲ್ಲಿ ಆಗಮಿಸಿದ್ದು ಅವರೆಲ್ಲರಿಗೂ ಕೂಡ ಮತದಾನದ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಶೋಭಾ, ಯೋಜನಾಧಿಕಾರಿ ಇಂದ್ರೇಶ್, ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.