Site icon Vistara News

Karnataka Election: ಮೀಸಲಾತಿ ತೆಗೆಯಲು ಯತ್ನಿಸಿದರೆ ಕ್ರಾಂತಿ ಗ್ಯಾರಂಟಿ: ಕಾಂಗ್ರೆಸ್‌ ವಿರುದ್ಧ ಗುಡುಗಿದ ಬೊಮ್ಮಾಯಿ

basavaraj bommai election rally at gubbi

basavaraj bommai

ಗುಬ್ಬಿ: “ನಾವು ನೀಡಿರುವ ಮೀಸಲಾತಿಯನ್ನು ಕಾಂಗ್ರೆಸ್ ತೆಗೆದು ಹಾಕುತ್ತೇವೆ ಎಂದು ಮುಂದೆ ಬಂದರೆ ರಾಜ್ಯದಲ್ಲಿ ಕ್ರಾಂತಿಯೇ ಆಗುತ್ತದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ (Karnataka Election) ಗುಡುಗಿದರು.

ತುಮಕೂರಿನ ಗುಬ್ಬಿ ಪಟ್ಟಣದ ಶ್ರೀ ಶನಿ ಮಹಾತ್ಮ ದೇವಾಲಯದಿಂದ ನಾಗಲಿಂಗೇಶ್ವರ ಸ್ವಾಮಿ ದೇವಾಲಯದವರೆಗೆ ಏರ್ಪಡಿಸಿದ್ದ ರೋಡ್ ಶೋನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಡುಗೊಲ್ಲ, ತಿಗಳ ಸಮುದಾಯ ಸೇರಿದಂತೆ ಎಲ್ಲ ವರ್ಗದವರಿಗೂ ನಿಗಮ ಮಂಡಳಿ ಮಾಡುವ ಮೂಲಕ ಆ ಸಮುದಾಯದ ಅಭಿವೃದ್ಧಿಗೆ ಅನುದಾನವನ್ನು ನೀಡಿ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ನಮ್ಮ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ ಮುಗಿಲೆತ್ತರಕ್ಕೆ ಏರಿದೆ” ಎಂದು ಹೇಳಿದರು.

ಇದನ್ನೂ ಓದಿ: Basavaraj Bommai: ರಾಮನಗರ, ಕನಕಪುರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಳ ಒಪ್ಪಂದ: ಸಿಎಂ ಬೊಮ್ಮಾಯಿ ಆರೋಪ

“ನಮ್ಮ ಸರ್ಕಾರದ ಸಾಮಾಜಿಕವಾಗಿ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಮೂಲಕ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ, ರೈತರಿಗಾಗಿ ಕಿಸಾನ್ ಸಮ್ಮಾನ್, ಅಂತಹ ನೂರಾರು ಯೋಜನೆಗಳನ್ನು ನೀಡಿದ್ದೇವೆ. ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ನೀಡಿರುವ ಸರ್ಕಾರ ಎಂಬ ಹೆಗ್ಗಳಿಕೆ ನಮ್ಮ ಕರ್ನಾಟಕ ರಾಜ್ಯಕ್ಕಿದೆ. ಅದಲ್ಲದೆ ಒಳ ಮೀಸಲಾತಿ ನೀಡುವ ಮೂಲಕ ಹಿಂದುಳಿದ ಸಮುದಾಯದ ಕೈ ಹಿಡಿದಿದ್ದೇವೆ” ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

“ಗುಬ್ಬಿಯಲ್ಲಿ ಬಿಜೆಪಿಯ ಕಮಲ ಅರಳುವ ಮೂಲಕ ರಾಜ್ಯದಲ್ಲಿ 130 ಸೀಟ್ ತೆಗೆದುಕೊಂಡು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದಿಲೀಪ್ ಅವರಿಗಾಗಿ ಕೆಲಸ ಮಾಡಿ ಗುಬ್ಬಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು” ಎಂದು ಅವರು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, “ನಮ್ಮೆಲ್ಲ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಎಲ್ಲ ಸಮುದಾಯದವರು ಈ ಬಾರಿ ನಮ್ಮ ಜತೆ ಕೈಜೋಡಿಸಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿ ಗೆಲ್ಲುವುದು ಶತಸಿದ್ಧ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ನಾರಾಯಣಸ್ವಾಮಿ, ಚುನಾವಣಾ ಉಸ್ತುವಾರಿ ಸಂಜಯ್ ಭಾಟ್ಯ, ಮುಖಂಡರಾದ ಚಂದ್ರಶೇಖರ್ ಬಾಬು, ತುಮಲ್ ನಿರ್ದೇಶಕ ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಹಾಗೂ ಸದಸ್ಯರು, ನಂಜೇಗೌಡ, ಶಿವಕುಮಾರ್, ಗುಡ್ಡದಹಳ್ಳಿ ಬಸವರಾಜು ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

Exit mobile version