ಶಿರಾ: ವಿಧಾನಸಭೆ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಎಲ್ಲ ಪಕ್ಷಗಳ ಮುಖಂಡರು ಪ್ರಚಾರದ ಜತೆಯಲ್ಲಿ ದೇವಸ್ಥಾನಗಳಿಗೂ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಸಲ್ಲಿಸಲಾರಂಭಿಸಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (HD devegowda) ಕೂಡ ಸೋಮವಾರ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿದ್ದು, ಓಂಕಾರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Amit Shah: ಬಿಜೆಪಿಯವರು ಅಮೆರಿಕ ಪ್ರೆಸಿಡೆಂಟನ್ನೇ ಕರ್ಕೊಂಡು ಬರಲಿ; ನಮಗೆ ದೇವೇಗೌಡ, ಕುಮಾರಸ್ವಾಮಿಯೇ ಚಾಣಕ್ಯ: ಎಚ್.ಡಿ. ರೇವಣ್ಣ
ದೇವೇಗೌಡರು ಓಂಕಾರೇಶ್ವರನ ಸನ್ನಿಧಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪೂಜೆಯಲ್ಲಿ ತೊಡಗಿದ್ದರು. ಗುರುಗುಂಡಾ ಬ್ರಹ್ಮೇಶ್ವರ ಮಠದ ಓಂಕಾರೇಶ್ವರ ಸ್ವಾಮಿ ದೇವರ ಪೂಜೆ ವೇಳೆ ಓಂಕಾರೇಶ್ವರ ಸ್ವಾಮಿ ತಲೆ ಮೇಲಿಂದ ಹೂ ಬಿದ್ದಿದೆ.
ಪೂಜೆ ಮುಗಿಸಿದ ನಂತರ ದೇವೇಗೌಡರು ಮಠದ ನಂಜಾವಧೂತಶ್ರೀ ಸ್ವಾಮಿಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದಾರೆ. ಸ್ವಾಮೀಜಿ ಅವರ ಮಠದ ಕೊಠಡಿಯಲ್ಲಿ ಮಾಜಿ ಪ್ರಧಾನಿ ಸಾಕಷ್ಟು ಸಮಯ ಕುಳಿತುಕೊಂಡು ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ನಾಯಕರಾಗಿರುವ ದೇವೇಗೌಡರನ್ನು (HD devegowda) ಮಠದ ಆಡಳಿತ ಮಂಡಳಿ ಸ್ವಾಗತ ಮಾಡಿಕೊಂಡಿದೆ. ಹಾಗೆಯೇ ಸ್ಥಳೀಯ ಜೆಡಿಎಸ್ ಕಾರ್ಯಕರ್ತರೂ ಕೂಡ ಮಠದ ಬಳಿ ಆಗಮಿಸಿದ್ದು, ಮೆಚ್ಚಿನ ನಾಯಕನಿಗೆ ಸ್ವಾಗತ ಕೋರಿದರು. ವಿಧಾನಸಭಾ ಚುನಾವಣೆಯ ರಣರಂಗವಾಗಿರುವ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಹುಮತ ಪಡೆದುಕೊಳ್ಳುವುದಕ್ಕಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿವೆ.