ಪಾವಗಡ: ಪಾವಗಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ. ವೆಂಕಟೇಶ್ (Karnataka Election) ಅವರು ಮಂಗಳವಾರದಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಬಿ.ಎನ್.ಚಂದ್ರಪ್ಪ, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಘುವೀರ್ ರೆಡ್ಡಿ, ಮಾಜಿ ಸಚಿವ ವೆಂಕಟರಮಣಪ್ಪ ಸೇರಿ ಅನೇಕ ಮುಖಂಡರು ವೆಂಕಟೇಶ್ ಅವರಿಗೆ ಸಾಥ್ ನೀಡಿದ್ದಾರೆ.
ಪಾವಗಡಕ್ಕೆ ಡಿಕೆಶಿ ಅವರು ಮಧ್ಯಾಹ್ನ ಒಂದು ಗಂಟೆಯ ಸಮಯಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ನಂತರ ಜ್ಯೂನಿಯರ್ ಕಾಲೇಜು ಮೈದಾನದಿಂದ ಶನಿಮಹಾತ್ಮ ವೃತ್ತದವರೆಗೆ ಬೃಹತ್ ಪ್ರಮಾಣದ ಮೆರವಣಿಗೆ ನಡೆಸಲಾಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, “ನನ್ನ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ವೇಳೆಯಲ್ಲಿಯೂ ಸಹ ಇಷ್ಟು ಜನ ಸೇರಿರಲಿಲ್ಲ. ಇಲ್ಲಿನ ಬೆಂಬಲವನ್ನು ನೋಡಿ ಸಂತೋಷವಾಗಿದೆ” ಎಂದು ಹೇಳಿದರು.
ಹಾಗೆಯೇ, “ಈ ಭಾಗದಲ್ಲಿ ಕಾಂಗ್ರೆಸ್ ಸರ್ಕಾರ ಸೋಲಾರ್ ಕೇಂದ್ರ ನಿರ್ಮಾಣ ಮಾಡಿ ಇಡೀ ಪ್ರಪಂಚವೇ ನಿಮ್ಮ ಊರನ್ನು ತಿರುಗಿ ನೋಡುವಂತೆ ಮಾಡಿದೆ. ನೀವು ಈಗ ಆ ಋಣವನ್ನು ತೀರಿಸಬೇಕಿದೆ. ಕಾಂಗ್ರೆಸ್‌ಗೆ ಮತ ಹಾಕಬೇಕಿದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಅಲ್ಲ. ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ” ಎಂದು ಕೋರಿಕೊಂಡರು.
“ಈಗಾಗಲೇ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸವದಿ, ಇತರೆ 20ರಿಂದ 25 ಮುಖಂಡರು ನಮ್ಮ ಪಕ್ಷ ಸೇರಿಕೊಂಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಿದ್ದೇವೆ. ಅವರೆಲ್ಲರೂ ಕಾಂಗ್ರೆಸ್ ಸಿದ್ಧಾಂತವನ್ನು ನಂಬಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಈ ಭಾಗದ ಶಾಸಕ ವೆಂಕಟರಮಣಪ್ಪ ಮತ್ತು ಮಗ ವೆಂಕಟೇಶ್‌ನಿಂದ ಏನಾದರೂ ತಪ್ಪಾಗಿದ್ದರೆ ಅದು ಹೊಟ್ಟೆಯಲ್ಲಿ ಹಾಕಿಕೊಳ್ಳಿ” ಎಂದು ಹೇಳಿದರು.
ಬಿಜೆಪಿ ಪಕ್ಷದ ಬಗ್ಗೆ ಕಿಡಿಕಾರಿದ ಡಿಕೆಶಿ, “ಮೋದಿ ಕೊಟ್ಟ ಮಾತಿನಂತೆ ಹದಿನೈದು ಲಕ್ಷ ರೂಪಾಯಿಯು ನಮ್ಮ ಅಕೌಂಟ್‌ಗೆ ಬಂದು ಸೇರಲಿಲ್ಲ. ನಿರುದ್ಯೋಗವನ್ನು ಹೋಗಲಾಡಿಸಲಿಲ್ಲ. ದಿನೇದಿನೆ ಬೆಳೆಯುತ್ತಿರುವ ಬೆಲೆ ಏರಿಕೆ ಇದೇ ಬಿಜೆಪಿಯವರ ಸಾಧನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜೂನ್ ತಿಂಗಳಿಂದ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿ, ಇನ್ನೂರು ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆ ನೀಡಲಿದ್ದೇವೆ. ಹಾಗಾಗಿ ನೀವು ಕಾಂಗ್ರೆಸ್‌ಗೇ ಮತ ಹಾಕಿ” ಎಂದು ಹೇಳಿದರು.
ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.