ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (Karnataka Election) ಟಿ.ಬಿ. ಜಯಚಂದ್ರ ಗುರುವಾರ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳ ಜತೆ ಮೆರವಣಿಗೆ ನಡೆಸಿದ ಅವರು ನಂತರ ನಾಮಪತ್ರ ಸಲ್ಲಿಸಿದ್ದಾರೆ.
ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಮೆರವಣಿಗೆ ಮೂಲಕ ಮಾಜಿ ಸಚಿವರಾದ ಜಯಚಂದ್ರ ಅವರು ಶಕ್ತಿ ಪ್ರದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಜಯಘೋಷ ಮೊಳಗಿಸುತ್ತಾ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಜಯಚಂದ್ರ ಅವರ ಹಿಂದಿನ ಸಾಧನೆಗಳ ಕುರಿತು ಘೋಷಣೆ ಮೊಳಗಿತು. ರಾಜ್ಯದ ವಿವಿಧ ಕಾಂಗ್ರೆಸ್ ಮುಖಂಡರ ಪರ ಕಾರ್ಯಕರ್ತರು ಜೈಕಾರ ಹಾಕಿದರು.
ಅಭ್ಯರ್ಥಿ ಜಯಚಂದ್ರ ಅವರು ಮಾತನಾಡಿ, “ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಲೂಟಿ ಮಾಡಲಾಗಿದೆ. ಶಾಸಕನಾಗಿ ಆಯ್ಕೆಯಾದ ಬಳಿಕ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಸರ್ವ ಸಮಾಜದ ಹಿತಕ್ಕಾಗಿ ದುಡಿಯುವೆ” ಎಂದರು.