ಕೊರಟಗೆರೆ: ಜನಸಾಮಾನ್ಯರು ಸ್ಥಳೀಯ ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಪರಿಹಾರಕ್ಕೆ ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹಾಗೂ ಶೀಘ್ರ ಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ (Koratagere News) ಮಾಡಿದರು.
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಜನರಿದ್ದೆಡೆಯೇ ಸೇವೆ ಒದಗಿಸುವ ಸರ್ಕಾರದ ಮಹಾದಾಸೆಯಂತೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆ, ರಾಜ್ಯ ಮಟ್ಟದ ಸಮಸ್ಯೆಗಳಿದ್ದರೆ ಕಾಲಮಿತಿಯೊಳಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಡಳಿತವು ಪ್ರತಿ ಹಳ್ಳಿ-ಹಳ್ಳಿಗೆ ಹೋಗಿ ಜನರ ಕಷ್ಟ-ಸುಖಗಳನ್ನು ಆಲಿಸಿ ಸ್ಪಂದಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸರ್ಕಾರದ ನಿರ್ದೇಶನದನ್ವಯ ಜನಸ್ಪಂದನ ಕಾರ್ಯಕ್ರಮದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಸ್ಥಳದಲ್ಲಿಯೇ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಜನಸಾಮಾನ್ಯರು ಈ ಸದಾವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸುಮಾರು 2.5 ಲಕ್ಷ ಹೇಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಉತ್ತಮ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡು ಗುರಿ ಮೀರಿ ಬಿತ್ತನೆ ಮಾಡಬೇಕು. ಬಿತ್ತನೆಗನುಗುಣವಾಗಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದ್ದು, ರೈತರು ರಿಯಾಯಿತಿ ದರದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಪ್ರಯೋಜನ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ 107 ಕೋಟಿ ರೂ. ಬರ ಪರಿಹಾರ ರೈತರ ಖಾತೆಗೆ ಜಮೆ ಮಾಡಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಇನ್ನೂ 30.000 ರೈತರಿಗೆ ಜಮೆ ಮಾಡಬೇಕಾಗಿದೆ. ಸಂಬಂಧಪಟ್ಟ ರೈತರನ್ನು ಸಂಪರ್ಕಿಸಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ಇತ್ತೀಚಿಗಷ್ಟೇ ಪಾವಗಡ, ಗುಬ್ಬಿ ತಾಲೂಕಿನಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಹೆಚ್ಚಿನ ಅಹವಾಲುಗಳು ಸ್ವೀಕೃತವಾಗಿವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳುವ ಬಗ್ಗೆ ರೈತರಿಗೆ 2 ರಿಂದ 3 ಸುತ್ತಿನ ತರಬೇತಿ ನೀಡಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಣಿ ಮಾಡಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Gold Rate Today: ಮತ್ತೆ ಏರಿಕೆಯಾದ ಚಿನ್ನದ ದರ; ಇಂದಿನ ಬೆಲೆ ಹೀಗಿದೆ
ಜಿಲ್ಲೆಯ ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರಿನ ಸೇವೆನೆಯಿಂದ ಘಟಿಸಿದ ವಾಂತಿ-ಭೇದಿ ಪ್ರಕರಣ ನಮಗೆ ಎಚ್ಚರಿಕೆ ಪಾಠವಾಗಿದೆ. ಕುಡಿಯುವ ನೀರಿನ ಬಗ್ಗೆ ಸಂಶಯ ಬಂದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಯೋಗ್ಯವಲ್ಲದ ನೀರನ್ನು ಜನರಿಗೆ ಕುಡಿಯಲು ಪೂರೈಕೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಭೂಮಿಯನ್ನು ಕಳೆದುಕೊಂಡ ರೈತರು ತಮಗಿನ್ನೂ ಪರಿಹಾರ ಕೈ ಸೇರಿಲ್ಲವೆಂದು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಾಗ ಭೂ ಸ್ವಾಧೀನ ಅಧಿಕಾರಿಗಳಿಗೆ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ತಾಲೂಕಿನ ಬೆಂಡೋಣೆ ಗ್ರಾಮದ ಲಕ್ಷ್ಮಮ್ಮ ತಮ್ಮ ಮನೆಗೆ ಓಡಾಡಲು ದಾರಿ ಬೇಕು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಸುಕುಮಾರ್ ಅವರ ಪಹಣಿ ತಿದ್ದುಪಡಿ ಸೇರಿದಂತೆ ಮತ್ತಿತರ ಪ್ರಮುಖ ಸಮಸ್ಯೆಗಳ ಮನವಿ ಅರ್ಜಿಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿ ಪರಿಹರಿಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಡಿ ಅಂತರ್ಜಾತಿ ವಿವಾಹವಾದ ನರಸಿಂಹಮೂರ್ತಿ ಹಾಗೂ ಪೂಜ್ಯ ದಂಪತಿಗಳಿಗೆ 1.25 ಲಕ್ಷ ರೂಗಳ ಎನ್‌ಎಸ್‌ಸಿ ಬಾಂಡ್ ವಿತರಿಸಲಾಯಿತು. ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ, ಕಂದಾಯ ಇಲಾಖೆಯಿಂದ ವೃದ್ದಾಪ್ಯ ವೇತನ , ವಿಧವಾ ವೇತನ , ಪವತಿ ಖಾತೆ , ಪಹಣಿ, ವಸತಿ ಸೌಲಭ್ಯಗಳ ಕಾರ್ಯಾದೇಶಗಳನ್ನು ಹಾಗೂ ಕಾಡು ಪ್ರಾಣಿಗಳಿಂದ ದಾಳಿಗೊಳಗಾದವರಿಗೆ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಜನಸಾಮಾನ್ಯರು ಸುರಕ್ಷಿತವಾಗಿ ಶಾಂತಿ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಲು ಪೊಲೀಸ್ ಇಲಾಖೆ ಸದಾ ಸಿದ್ಧವಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಸೇವೆ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ
ಈ ವೇಳೆ ತಹಸೀಲ್ದಾರ್ ಕೆ. ಮಂಜುನಾಥ್, ತಾ.ಪಂ. ಇಒ ಅಪೂರ್ವ ಸಿ. ಅನಂತರಾಮು , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಗೂ ಸಹಾಯಕ ನಿರ್ದೇಶಕಿ ಯಮುನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.