ಕುಣಿಗಲ್: ಪಟ್ಟಣದಲ್ಲಿರುವ ಬೆಸ್ಕಾಂ ಕಚೇರಿಗೆ ರೈತರು ಮಂಗಳವಾರದಂದು ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಮಾರ್ಕೋನಹಳ್ಳಿ ಜಲಾಶಯದ ಬಳಿ ಇರುವ ಹಲವು ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ.
ರಾಗಿಹಳ್ಳಿ, ಹಂಪಾಪುರ, ಕಿತ್ತಘಟ್ಟ, ಹೊಸೂರು, ಕಾಚೇನಹಳ್ಳಿ, ಕುರುಬರಶೆಟ್ಟಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗುತ್ತಿದೆ. ಕಳೆದ ನಾಲ್ಕು ತಿಂಗಳುಗಳಿಂದ ಈ ಸಮಸ್ಯೆ ಇದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆಯಾದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಬೆಸ್ಕಾಂ ಕಚೇರಿಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕಚೇರಿಯ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ರೈತರು ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿದ್ದಾರೆ.
“ಬೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಸಮಸ್ಯೆ ಬಗ್ಗೆ ಕಳೆದೊಂದು ವರ್ಷದಿಂದ ಮನವಿ ಮಾಡಲಾಗಿತ್ತು ರೈತರ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆಯೇ ಬೆಸ್ಕಾಂ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಪುರುಷೋತ್ತಮ್ ಹಾಗೂ ಬೆಸ್ಕಾಂ ಅಧಿಕಾರಿ ವೀರಭದ್ರಚಾರಿ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರೂ ಅಧಿಕಾರಿಗಳನು ತರಾಟೆಗೆ ತೆಗೆದುಕೊಂಡ ರೈತರು, “ನಿಮ್ಮ ಮನೆಯಲ್ಲಿ ವಿದ್ಯುತ್ ಇಲ್ಲದೆ ಬದುಕುತ್ತೀರಾ” ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಕಂದಹಾರ್‌ಗೆ ಬಂದ ಕುಣಿಗಲ್ ಹುಡುಗ
ಈ ಬಗ್ಗೆ ಮಾತನಾಡಿರುವ ರೈತ ಮುಖಂಡ ಆನಂದ್ ಪಟೇಲ್ ಅವರು, “ವಿದ್ಯುತ್ ಕೊರತೆಯ ಕಾರಣದಿಂದ ನೀರಿಲ್ಲದೆ ರೈತರ ತೆಂಗು, ಬಾಳೆ, ಅಡಿಕೆ ಬೆಳೆಗಳು ಒಣಗುತ್ತಿದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆದು ನೆಮ್ಮದಿಯಿಂದ ಇರುವ ಅಧಿಕಾರಿಗಳಿಗೆ ರೈತರ ಸಮಸ್ಯೆಗಳು ಕಾಣುತ್ತಿಲ್ಲವೇ? ತುರ್ತಾಗಿ ರೈತರ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.