ಶಿರಾ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಮಂಗಳವಾರ ಶಿರಾ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡು, ಮತಯಾಚನೆ (Lok Sabha Election 2024) ನಡೆಸಿದರು.
ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀ ಬಂಡಿ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಮಾತನಾಡಿದ ಗೋವಿಂದ ಎಂ.ಕಾರಜೋಳ, ಸ್ವಾತಂತ್ರ್ಯ ನಂತರ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರ ಯಾವುದೇ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ವಿಫಲವಾಗಿದ್ದು, ಪ್ರಧಾನಿ ಮೋದಿ ಅವರು ಕೇವಲ 10 ವರ್ಷದ ಆಡಳಿತದಲ್ಲಿ ವಿಶ್ವವೇ ಭಾರತದತ್ತ ನೋಡುವಂತೆ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನರು ಮತ್ತೊಮ್ಮೆ ತಮ್ಮನ್ನು ಆಯ್ಕೆ ಮಾಡುವಂತೆ ಮತದಾರರದಲ್ಲಿ ಅವರು ಮನವಿ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ, ಸುಳ್ಳಿನ ಹೇಳಿಕೆಗೆ ಬೆಲೆ ಕೊಡದೆ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಿರಾ ವಿಧಾನಸಭಾ ಕ್ಷೇತ್ರದ ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ, ಕಸಬಾ ಹೋಬಳಿಯ ಮದಲೂರಿನಲ್ಲಿ, ಕಳ್ಳಂಬೆಳ್ಳ ಹೋಬಳಿಯ ಹನುಮಂತಪುರ, ಗೌಡಗೆರೆ ಹೋಬಳಿಯ ತಾವರೆಕೆರೆ ಹಾಗೂ ಶಿರಾ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ, ಚುನಾವಣಾ ಪ್ರಚಾರ ಕೈಗೊಂಡು ಮತಯಾಚಿಸಿದರು.
ಇದನ್ನೂ ಓದಿ: IPL 2024: 13 ವರ್ಷದ ಐಪಿಎಲ್ ದಾಖಲೆ ಮುರಿದ ಮಾರ್ಕಸ್ ಸ್ಟೋಯಿನಿಸ್
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಅರ್. ಉಗ್ರೇಶ್, ಮುಖಂಡರಾದ ಎಸ್.ಆರ್. ಗೌಡ್, ಬಿ.ಕೆ. ಮಂಜುನಾಥ್ ಹಾಗೂ ಬಿಜೆಪಿ- ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.