Site icon Vistara News

Pavagada News: ಅದ್ಧೂರಿಯಾಗಿ ಜರುಗಿದ ಈದ್‌ ಉಲ್‌ ಫಿತರ್‌; ಕುರಾನ್‌ ಕೊಟ್ಟ ಸರ್ವಧರ್ಮ ಪೀಠದ ರಾಮ್ ಮೂರ್ತಿ ಸ್ವಾಮೀಜಿ

#image_title

ಪಾವಗಡ: ಎಲ್ಲೆಡೆ ಶನಿವಾರ ಮುಸ್ಲಿಂ ಸಮುದಾಯದಿಂದ ಈದ್‌ ಉಲ್‌ ಫಿತರ್‌ ಅನ್ನು ಆಚರಿಸಲಾಗಿದ್ದು, ಪಾವಗಡದಲ್ಲಿಯೂ ಸಹ ಮುಸ್ಲಿಂ ಸಮುದಾಯದವರು ಈ ಹಬ್ಬವನ್ನು ವಿಜೃಂಭಣೆಯಿಂದ (Pavagada News) ಆಚರಿಸಿದ್ದಾರೆ.

ಪಟ್ಟಣದ ಎಂಟು ಮಸೀದಿಗಳಿಂದ ಹೊರಟ ಸಮುದಾಯದ ಮುಖಂಡರು, ಪಶುವೈದ್ಯ ಇಲಾಖೆಯ ಹತ್ತಿರ ಸೇರಿದ್ದಾರೆ. ಅಲ್ಲಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಈದ್ಗ್ ಮೈದಾನ ಸೇರಿ, ಅಲ್ಲಿ ಈದ್ ಉಲ್ ಫಿತರ್ ನಮಾಜ್ ಪೂರೈಸಿದರು. ನಂತರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಹಂಚಿಕೊಳ್ಳುವ ಮೂಲಕ ರಂಜಾನ್ ಆಚರಣೆ ಮಾಡಿಕೊಂಡರು.

ಇದೇ ವೇಳೆ ತಹಸೀಲ್ದಾರ್ ಕೆ.ಎಸ್. ಸುಜಾತ ಅವರು ಈದ್ಗ್ ಮೈದಾನಕ್ಕೆ ಭೇಟಿ ನೀಡಿ ಮುಸ್ಲಿಂ ಸಮುದಾಯಕ್ಕೆ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು. ನಂತರ ಮಾತನಾಡಿದ ಅವರು, “ನೀವುಗಳು ಒಂದು ತಿಂಗಳ ಕಾಲ ಉಪವಾಸ ಇದ್ದು ತಮ್ಮ ಮನಸ್ಸನ್ನು ಸ್ವಚ್ಛ ಮಾಡಿಕೊಂಡಿರುತ್ತೀರ. ಅದೇ ಸ್ವಚ್ಛ ಮನಸ್ಸಿನಿಂದ ಈ ಭಾಗದಲ್ಲಿ ಎಲ್ಲ ಸಮುದಾಯದವರು ಅಣ್ಣ ತಮ್ಮಂದಿರಂತೆ ಜೀವನ ಕಳೆಯುತ್ತಿದ್ದೀರ. ಹೀಗೆ ಸದಾ ಎಲ್ಲರೂ ಒಗ್ಗೂಡಿಕೊಂಡು ಜೀವನ ನಡೆಸಲು ಆ ದೇವರಲ್ಲಿ ನಾನು ಸಹ ಪ್ರಾರ್ಥನೆ ಸಲ್ಲಿಸುತ್ತೇನೆ. ಹಾಗೆಯೇ ಬರುವ ಮೇ 10ರಂದು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಎಂದರು.

ಇದೇ ವೇಳೆ ಸರ್ವಧರ್ಮ ಪೀಠದ ರಾಮ್ ಮೂರ್ತಿ ಸ್ವಾಮೀಜಿಯವರು ಮಸೀದಿಗೆ ಭೇಟಿ ನೀಡಿ ಮಸೀದಿ ಮುಖ್ಯಸ್ಥರಿಗೆ ಕನ್ನಡ ಹಾಗೂ ತೆಲುಗು ಮಾದರಿಯ ಕುರಾನ್ ಅನ್ನು ನೀಡಿ ರಂಜಾನ್ ಹಬ್ಬದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿಯ ಮುತವಲ್ಲಿ ಲತೀಪ್ ಸಾಬ್, ಮಾಜಿ ಮುತವಲ್ಲಿ ಫಜ್ಲುಸಾಬ್, ಆರ್.ಕೆ.ನಿಸಾರ್, ಅನ್ವರ್ ಸಾಬ್, ಹೋಟಲ್ ಸಾದೀಕ್, ಸಮೀಉಲ್ಲ, ಆರ್.ಟಿ.ಖಾನ್, ರಿಜ್ವಾನ್ ಉಲ್ಲಾ, ಷ ಬಾಬು ಸೇರಿ ಇತರೆ ಮುಸ್ಲಿಂ ಮುಖಂಡ ಭಾಗವಹಿಸಿದ್ದರು. ಇದೇ ವೇಳೆ ಸಮುದಾಯದ ವತಿಯಿಂದ ತಹಸೀಲ್ದಾರ್ ಸುಜಾತಾ ಅವರಿಗೆ ಗೌರವಿಸಲಾಯಿತು. ಈದ್ ಉಲ್ ಫಿತರ್ ನಾಮಾಜಿಗೆ ಬಂದಂತಹ ಜನರಿಗೆ ಗ್ರಾನೈಟ್ ಅಂಗಡಿ ಮಾಲಿಕ ಶಪೀ ಅವರು ತಣ್ಣನೆಯ ನೀರಿನ ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ: K Sudhakar: ರಂಜಾನ್‌ ಹಿನ್ನೆಲೆ ಈದ್ಗಾ ಮೈದಾನಕ್ಕೆ ತೆರಳಿದ ಸಚಿವ ಸುಧಾಕರ್‌ಗೆ ವಿರೋಧ? ಗಲಾಟೆ ನಡೆದಿದ್ದು ಏಕೆ?

ಈ ರಂಜಾನ್ ಹಬ್ಬದ ಸಮಯದಲ್ಲಿ ತಾಲೂಕಿನ ಮುಸ್ಲಿಂ ಸಮುದಾಯಕ್ಕೆ ಸ್ಥಳೀಯ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ. ವೆಂಕಟೇಶ್, ವಕೀಲ ನಾಗೇಂದ್ರಪ್ಪ, ಸೋಮ್ಲಾನಾಯ್ಕ್, ನೇರಳೆಕುಂಟೆ ನಾಗೇಂದ್ರ, ಕೃಷ್ಣನಾಯ್ಕ್, ಗಾಯತ್ರಿ ಬಾಯಿ, ಇತರೆ ಅನೇಕ ಮುಖಂಡರು ಶುಭಾಶಯಗಳು ಕೋರಿದ್ದಾರೆ.

Exit mobile version