Site icon Vistara News

Tumkur News: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ ಪಾವಗಡದಲ್ಲಿ ಪ್ರತಿಭಟನೆ

Protest demanding release of education subsidy for building construction workers at pavagada

ಪಾವಗಡ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ (Building Construction Labors) ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ (ಸಿಐಟಿಯು) ಪಾವಗಡ ತಾಲೂಕು ಸಮಿತಿ ವತಿಯಿಂದ ಇಲ್ಲಿನ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ (Protest) ನಡೆಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನಾ ಮೆರವಣಿಗೆ ಮೂಲಕ ಕೆಬಿ ಕಚೇರಿ ಮುಂಭಾಗದ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾರ್ಮಿಕ ಇಲಾಖೆ ಅಧಿಕಾರಿ ರವೋಫ್‌ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

ಪಾವಗಡ ಸಿ.ಐ.ಟಿ.ಯು. ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಕಾನೂನು ಪ್ರಕಾರ ಪ್ರತಿವರ್ಷ ನೀಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಿಲ್ಲ. 2022-23ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಈವರೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ

2023-24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ, ಅರ್ಧ ವರ್ಷ ಕಳೆಯುತ್ತಿದ್ದರೂ ಈವರೆಗೂ ಸಹಾಯಧನಕ್ಕಾಗಿ ಅರ್ಜಿಯನ್ನೇ ಆಹ್ವಾನಿಸಿಲ್ಲ. ಹಾಗೆಯೇ 2021-22ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು ಒಂದೂವರೆ ಲಕ್ಷ ಜನ ಕಾರ್ಮಿಕರಿಗೆ ಸಹಾಯಧನ ಕೊಡದೇ, ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಷರತ್ತುಗಳ ಕಾಯ್ದೆ – 1996 ರ ನಿಯಮ 45ರ ಅಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಇಬ್ಬರು ಮಕ್ಕಳಿಗೆ ‘ಕಲಿಕಾ ಭಾಗ್ಯ’ ಯೋಜನೆಯಡಿ ಶೈಕ್ಷಣಿಕ ಸಹಾಯಧನ ನೀಡಬೇಕೆಂದು ಕಾನೂನು ಹೇಳುತ್ತದೆ. ನೋಂದಾಯಿತ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ ಇದೀಗ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಲು ‘ಹಣದ ಕೊರತೆ ಇದೆ’ ಎಂದು ಹೇಳಲಾಗುತ್ತಿದೆ ಎಂದು ದೂರಿದರು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಪದಾಧಿಕಾರಿಗಳಾದ ರಾಮಾಂಜಿನಪ್ಪ, ಮಮತ, ನಾಗರಾಜ್ ಹಾಗೂ ದುರ್ಗಪ್ಪ, ಶಿವಗಂಗಮ್ಮ, ಕೆಂಚಮ್ಮ, ನವಿನ್ ಕುಮಾರ್, ಜಬಿವುಲ್ಲಾ, ಈಶ್ವರಪ್ಪ, ಚಾಂದ್ ಬಾಷ, ಮಲೇಶಪ್ಪ, ಕಾಮಕ್ಕ, ಹನಮಂತರಾಯಪ್ಪ, ಕಮಲಮ್ಮ, ದೇವಿ, ನಂಜಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version