ತುಮಕೂರು: ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ (Road Accident) ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. ತುಮಕೂರು ನಗರದ ಶಿರಾ ಗೇಟ್ ಬಳಿ ಎಸ್ ಮಾಲ್ ಬಳಿ ಘಟನೆ ನಡೆದಿದೆ. ತುಮಕೂರಿನ ಶಾಂತಿನಗರ ನಿವಾಸಿ ರಾಜಣ್ಣ (64) ಮೃತ ದುರ್ದೈವಿ.
ರಾಜಣ್ಣ ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೋಮವಾರ ಬೆಳಗ್ಗೆ ತರಕಾರಿ, ಹೂ-ಹಣ್ಣು ತರಲು ಅಂತರಸನಹಳ್ಳಿ ಮಾರುಕಟ್ಟೆಗೆ ತೆರಳಿದ್ದರು. ಮಾರ್ಕೆಟ್‌ನಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ನಿಂದ ಹಾರಿ ಬಿದ್ದ ರಾಜಣ್ಣರ ತಲೆಯೇ ನುಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಅಪಘಾತದಲ್ಲಿ ಸ್ಕೂಟರ್ ಪೂರ್ತಿ ಛಿದ್ರಗೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆ ತುಮಕೂರು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Murder Case : ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ!
ಹಿಟ್ ಆ್ಯಂಡ್ ರನ್, ಬೈಕ್ ಡಿಕ್ಕಿ: ಇಬ್ಬರು ಸಾವು
ಬೆಂಗಳೂರು: ರಾಜಧಾನಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ (Road Accident) ಪ್ರಕರಣಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸಾವಿಗೀಡಾಗಿದ್ದಾರೆ. ರಿಂಗ್ ರೋಡ್ ನಮ್ಮೂರ ತಿಂಡಿ ಹೋಟೆಲ್ ಬಳಿ ರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ರಾಜರಾಜೇಶ್ವರಿನಗರದ ಶ್ರೇಯಸ್ (23) ಸಾವನ್ನಪ್ಪಿದ ಬೈಕ್ ಸವಾರ. ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಸ್, ರಾತ್ರಿ ವಿದ್ಯಾರಣ್ಯಪುರದಲ್ಲಿ ಸ್ನೇಹಿತನನ್ನು ಭೇಟಿ ಮಾಡಿ ಮನೆಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮೈಸೂರು ರಸ್ತೆ ಟೋಲ್ ಗೇಟ್ ಬಳಿ ಹಿಟ್ ಆ್ಯಂಡ್ ರನ್ ಸಂಭವಿಸಿದ್ದು, ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಮೃತ ಮಹಿಳೆಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಸಿಸಿಟಿವಿಗಳ ಪರಿಶೀಲನೆ ಮಾಡಿ ಅಪಘಾತ ಮಾಡಿ ಎಸ್ಕೇಪ್ ಆಗಿರುವ ವಾಹನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.
ಆಟೋ ರಿಕ್ಷಾ,ಪಿಕಪ್ ನಡುವೆ ಭೀಕರ ಅಪಘಾತ; 8 ಮಂದಿ ದುರ್ಮರಣ
ಮುಂಬಯಿ: ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ವೇಗವಾಗಿ ಬಂದ ಪಿಕಪ್ ವಾಹನವೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಅಪಘಾತ ಭಾನುವಾರ ತಡ ರಾತ್ರಿ 11.30ರ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ಕಲ್ಯಾಣ್-ಅಹ್ಮದ್‌ನಗರ ರಸ್ತೆಯಲ್ಲಿನ ಓತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹ್ಮದ್‌ನಗರದಿಂದ ಕಲ್ಯಾಣ್ (ಥಾಣೆ ಜಿಲ್ಲೆ) ಕಡೆಗೆ ಹೋಗುತ್ತಿದ್ದ ಪಿಕ್‌ಅಪ್ ವಾಹನವು ಪಿಂಪಲ್‌ಗಾಂವ್ ಜೋಗಾದ ಪೆಟ್ರೋಲ್ ಪಂಪ್ ಬಳಿ ಎದುರು ದಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ರಿಕ್ಷಾದಲ್ಲಿದ್ದ 7 ಮಂದಿ ಮತ್ತು ಪಿಕಪ್ ಸವಾರ ಸೇರಿ ಒಟ್ಟು 8 ಮಂದಿ ಸಾವನ್ನಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್ ಕ್ಲಿಕ್ ಮಾಡಿ