ಶಿರಾ: ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಶಿರಾದಿಂದ ಬೈರೇನಾಹಳ್ಳಿವರೆಗೆ 1,000 ಕೋಟಿ ರೂ. ವೆಚ್ಚದಲ್ಲಿ ಒಟ್ಟು 52 ಕಿಲೋಮೀಟರ್‌ಗಳ ನಾಲ್ಕು ಪಥಗಳ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ (Shira News) ತಿಳಿಸಿದ್ದಾರೆ.
ಸಚಿವಾಲಯವು ಈ ಕಾಮಗಾರಿಯನ್ನು 2024-25ನೇ ಸಾಲಿನ ವಾರ್ಷಿಕ ಮಂಜೂರಾತಿ ಮಿತಿಯಲ್ಲಿ ಸೇರಿಸಿ ಅನುಮೋದನೆ ನೀಡಿದೆ ಎಂದು ತಿಳಿಸಿರುವ ಅವರು, ಅನುಮೋದಿತ ಯೋಜನೆಯ ಪ್ರಕಾರ ಅಂದಾಜು ವೆಚ್ಚ (ಎಸ್ಟಿಮೇಟ್) ವಿವರವನ್ನು ಶೀಘ್ರವೇ ಸಚಿವಾಲಯದ ಪ್ರಧಾನ ಕಚೇರಿಗೆ ಸಲ್ಲಿಸಬೇಕು ಎಂದು ಸಚಿವಾಲಯದ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆ) ಎ. ಮೌಲಿಕ್ ಸೂಚಿಸಿದ್ದಾರೆ ಎಂದು ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: Lakshmi Hebbalkar: ಅಂಗನವಾಡಿ ಹೆಸರು ಶೀಘ್ರದಲ್ಲೇ ಬದಲಾವಣೆ! ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುಳಿವು
ಶಿರಾ ತಾಲೂಕಿನ ಈ ಪ್ರತಿಷ್ಠಿತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅತಿ ಶೀಘ್ರದಲ್ಲಿ ಟೆಂಡರ್ ಕರೆದು ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ನಿಗದಿತ ಸಮಯದಲ್ಲಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಹಾಗೂ ಈ ಯೋಜನೆಗೆ ಅಗತ್ಯ ಹಣಕಾಸಿನ ನೆರವು ಸಹ ದೊರೆತಿದೆ.
ಈ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡ ನಂತರ ಶಿರಾದಿಂದ ರಾಜಧಾನಿ ಬೆಂಗಳೂರು ಹಾಗೂ ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಯಾಣಿಕರು ಸಂಚರಿಸಬಹುದು ಹಾಗೂ ಸರಕು ಸಾಗಾಣಿಗಳನ್ನು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಯೋಜನೆಗೆ ತುಂಬಾ ಸಹಕಾರ ಕೊಟ್ಟಿದ್ದಾರೆ. ತಾವು ಸಹ ನಾಲ್ಕೈದು ಬಾರಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಯೋಜನೆ ಬಗ್ಗೆ ಚರ್ಚಿಸಿ ಈ ರಸ್ತೆ ಕಾಮಗಾರಿಗೆ ಅಗತ್ಯ ಹಣಕಾಸು ನೆರವು ಹಾಗೂ ಅನುಮತಿಯನ್ನು ತ್ವರಿತವಾಗಿ ಪಡೆದಿರುವುದಾಗಿ ಶಾಸಕ ಟಿ.ಬಿ. ಜಯಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.