ಶಿರಾ: ನಗರದ ವಿವಿಧೆಡೆ ಫುಟ್‌ಪಾತ್ ಆಕ್ರಮಿಸಿಕೊಂಡು ವ್ಯಾಪಾರ-ವಹಿವಾಟು ನಡೆಸುತ್ತಿದ್ದ ಅಂಗಡಿ-ಮುಂಗಟ್ಟುಗಳ ತೆರವು ಕಾರ್ಯಾಚರಣೆಯು ಮಂಗಳವಾರ ಬೆಳಗ್ಗೆ ಶಿರಾ ಉಪ ವಿಭಾಗ ಡಿವೈಎಸ್ಪಿ ಬಿ. ಕೆ. ಶೇಖರ್ ನೇತೃತ್ವದಲ್ಲಿ (Shira News) ನಡೆಯಿತು.
ಶಿರಾ ಉಪ ವಿಭಾಗ ಡಿವೈಎಸ್ಪಿ ಬಿ.ಕೆ. ಶೇಖರ್ ಅವರ ನೇತೃತ್ವದಲ್ಲಿ ಶಿರಾ ನಗರ ಠಾಣೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡು ರಸ್ತೆ ಬದಿಯ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ, ಪಾದಾಚಾರಿಗಳು ಸೇರಿದಂತೆ ದ್ವಿಚಕ್ರ ವಾಹನಗಳ ನಿಲುಗಡೆಗೆ ತೀವ್ರ ತೊಂದರೆ ಅನುಭವಿಸುವಂತಾಗಿತ್ತು.
ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗ, ಸಾರ್ವಜನಿಕ ಆಸ್ಪತ್ರೆ ಮುಂಭಾಗ, ಪಶು ಆಸ್ಪತ್ರೆ, ಬುಕ್ಕಾಪಟ್ಟಣ ರಸ್ತೆಯ ಬಳಿ ಹಾಗೂ ಇತರೆಡೆ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ, ವ್ಯಾಪಾರ-ವಹಿವಾಟು ನಡೆಸಲಾಗುತ್ತಿತ್ತು. ಇದರಿಂದಾಗಿ ಪ್ರತಿನಿತ್ಯ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ತೆರವು ಕಾರ್ಯಾಚರಣೆ ನಡೆಯಿತು. ಹಣ್ಣು ಮತ್ತು ಹೂ, ತರಕಾರಿ ವ್ಯಾಪಾರ ಮಾಡಲು ಇರಿಸಲಾಗಿದ್ದ ಪೆಟ್ಟಿಗೆ ಅಂಗಡಿಗಳು ಸೇರಿದಂತೆ ಇತರೆ ವ್ಯಾಪಾರ ಚಟುವಟಿಕೆಗಳನ್ನು ಈ ವೇಳೆ ತೆರವು ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ: Karnataka Rain : ಭಾರಿ ಮಳೆ ಎಫೆಕ್ಟ್-ಮಲಗಿದ್ದ ವ್ಯಕ್ತಿ ಮೇಲೆ ಬಿದ್ದ ಗೋಡೆ; ಮರ ಬಿದ್ದು ಕಾರು ಜಖಂ, ಚಾಲಕ ಜಸ್ಟ್ ಮಿಸ್
ಈ ವೇಳೆ ವ್ಯಾಪಾರಿಗಳಿಗೆ ಫುಟ್‌ಪಾತ್ ಮೇಲೆ ವ್ಯಾಪಾರ-ವಹಿವಾಟು ನಡೆಸದಂತೆ ಹಾಗೂ ನಿಗದಿತ ಸ್ಥಳಗಳಲ್ಲಿ ವ್ಯಾಪಾರ ನಡೆಸುವಂತೆ ಸೂಚನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಿರಾ ನಗರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.