ಶಿರಾ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ಇತರೆ ವಿದ್ಯಾಭ್ಯಾಸ ಮಾಡಿದ ಯುವಕ-ಯುವತಿಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ತರಬೇತಿ ಪಡೆಯಲು ಶಿರಾದಲ್ಲಿ (Shira News) ಸ್ಕಿಲ್ ಯುನಿವರ್ಸಿಟಿ ಸ್ಥಾಪಿಸಲು ಉದ್ದೇಶಿಸಿದ್ದು, ತರಬೇತಿ ನೀಡಲು ಮುಂಬೈನ ಒಂದು ಯುನಿವರ್ಸಿಟಿ ಮುಂದೆ ಬಂದಿದೆ. ಅದಕ್ಕಾಗಿ 20 ಎಕರೆ ಜಮೀನು ಕೇಳಿದ್ದಾರೆ. ಶೀಘ್ರ ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ತಿಳಿಸಿದರು.
ನಗರದ ಮಿನಿ ವಿಧಾನ ಸೌಧದಲ್ಲಿ ಮಂಗಳವಾರ ನಡೆದ ಶಿರಾ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆ ಮಾಲೀಕರು, ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: Album Song: ಅನಿವಾಸಿ ಕನ್ನಡಿಗರ ‘ಹನಿ ಹನಿ’ ಆಲ್ಬಂ ಸಾಂಗ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್
ತಾಲೂಕಿನ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಇತರೆಡೆ ಹೋಗದೆ ಸ್ಥಳೀಯವಾಗಿಯೇ ಉದ್ಯೋಗ ಪಡೆಯಲಿ ಎನ್ನುವ ಉದ್ದೇಶ ಈಡೇರಬೇಕು. ಆದ್ದರಿಂದ ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಸ್ಥಳೀಯವಾಗಿ ಪ್ರತಿಭಾವಂತರಿದ್ದಾರೆ, ಅವರಿಗೆ ಸರಿಯಾದ ತಾಂತ್ರಿಕ ತರಬೇತಿ ನೀಡಿ ಉದ್ಯೋಗಾವಕಾಶ ನೀಡಿ ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೆಐಎಡಿಬಿ ಅಧಿಕಾರಿಗಳು ಕೈಗಾರಿಕಾ ವಸಹತುಗಳ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಕೊಳವೆ ಬಾವಿ ಕೊರೆಸಲಾಗಿದೆ ಆದರೂ ನೀರಿನ ಕೊರತೆ ಉಂಟಾಗುತ್ತಿದೆ ಆದ್ದರಿಂದ ಹೇಮಾವತಿ ನೀರನ್ನು ಕೈಗಾರಿಕಾ ವಸಹತು ಪ್ರದೇಶಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೈಗಾರಿಕಾ ವಸಹತು ಪ್ರದೇಶಕ್ಕೆ ಹತ್ತಿರವಿರುವ ಗುಮ್ಮನಹಳ್ಳಿ ಕೆರೆಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ
ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಶೀಘ್ರವಾಗಿ ಶಿರಾದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ʼಸಾರ್ಕೋಮಾ ಕ್ಯಾನ್ಸರ್ʼ ಜಾಗೃತಿಗಾಗಿ ಎಚ್‌ಸಿಜಿಯಿಂದ 5ಕೆ ವಾಕಥಾನ್
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ದತ್ತಾತ್ರೆಯ ಜೆ. ಗಾದಾ, ತಾ.ಪಂ. ಇಒ ಹರೀಶ್, ಪೌರಾಯುಕ್ತ ರುದ್ರೇಶ್, ಕೆಐಎಡಿಬಿ ಅಧಿಕಾರಿಗಳು ಹಾಗೂ ವಿವಿಧ ಕಾರ್ಖಾನೆ ಮಾಲೀಕರು, ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.