ಶಿರಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಚಾವಣಿ ಕುಸಿದು ಶಿಕ್ಷಕಿಯ ತಲೆಗೆ ಪೆಟ್ಟಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿರುವ ಘಟನೆ ನಗರದ ಮಧುಗಿರಿ ರಸ್ತೆಯ ಸಮೀಪದ ವಾರ್ಡ್ ನಂ 21ರಲ್ಲಿ ಗುರುವಾರ (Shira News) ಮಧ್ಯಾಹ್ನ ನಡೆದಿದೆ.
ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಚಾವಣಿಯ ಗಾರೆ ಕುಸಿದು ಬಿದ್ದು, ಪಾಠ ಮಾಡುತ್ತಿದ್ದ ಶಿಕ್ಷಕಿ ಫರೀದಾಬಾನು ತಲೆಗೆ ಪೆಟ್ಟಾಗಿದೆ. ಶಿಕ್ಷಕಿ ಫರೀದಾಬಾನು ಎಂದಿನಂತೆ ಶಾಲೆಗೆ ಬಂದು ಪಾಠ ಮಾಡುತ್ತಿದ್ದರು. ಆದರೆ ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಪಾಠ ಮಾಡುತ್ತಿದ್ದ ಕೊಠಡಿಯ ಚಾವಣಿಯ ಗಾರೆ ಕುಸಿದು ಶಿಕ್ಷಕಿಯ ತಲೆಗೆ ಪೆಟ್ಟಾಗಿದೆ. ಆದರೆ ಅದೃಷ್ಟವಶಾತ್ ಶಾಲಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ: Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ಕೊಠಡಿಗಳು ಇದ್ದು, ಇದರಲ್ಲಿ ಸುಮಾರು 10 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಸುಮಾರು 240 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲಾ ಕಟ್ಟಡವು ಬಹಳ ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲೇ ನಿತ್ಯ ಪಾಠ, ಬೋಧನೆ ನಡೆಯುತ್ತಿದೆ. ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ, ಯಾರೊಬ್ಬರೂ ಎಚ್ಚೆತ್ತುಕೊಳ್ಳದಿರುವುದಕ್ಕೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ
ಘಟನೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ನಗರಸಭೆ ಸದಸ್ಯ ಇರ್ಷಾದ್ ಚಾಂದ್ ಭಾಷಾ ಸೇರಿದಂತೆ ಹಲವರು ಭೇಟಿ ನೀಡಿ, ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ಶಾಲೆಗೆ ಬದಲಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.