ಶಿರಾ: ಶಿರಾ ಮಾರ್ಗವಾಗಿ (Shira News) ತುಮಕೂರಿಗೆ ತೆರಳಲು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಮಂಗಳವಾರ ಬೆಳಿಗ್ಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಯಾಣಿಕರು ಪ್ರತಿಭಟನೆ (Protest) ನಡೆಸಿದರು.
ಶಿರಾದಿಂದ ತುಮಕೂರು ಮಾರ್ಗಕ್ಕೆ ತೆರಳಲು ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಹಾಗೂ ವಿವಿಧ ಕಾರ್ಯಗಳ ನಿಮಿತ್ತ ಶಿರಾದಿಂದ ತುಮಕೂರು ಮತ್ತು ಬೆಂಗಳೂರಿಗೆ ತೆರಳಲು ಬೆಳಿಗ್ಗೆಯ ಸಮಯದಲ್ಲಿ ಸೂಕ್ತ ಬಸ್‌ಗಳ ವ್ಯವಸ್ಥೆ ಇಲ್ಲದಿರುವುದರಿಂದ ದಿನನಿತ್ಯ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನೂ ಓದಿ: Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆಪ್; ಏನಿದರ ಉಪಯೋಗ?
ಶಕ್ತಿ ಯೋಜನೆ ಜಾರಿ ಬಳಿಕ ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ಮತ್ತಿತರೆ ಕಡೆಗಳಿಂದ ಬರುವ ಬಹುತೇಕ ಬಸ್‌ಗಳು ತುಂಬಿ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಯಾಣಿಕರು ಪ್ರತಿನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ ಜತೆಗೆ ಸರಣಿ ರಜಾ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಿರಾ ಕೆಎಸ್‌ಆರ್‌ಟಿಸಿ ಉಪ ವಿಭಾಗಾಧಿಕಾರಿ ವಿದ್ವತ್ ರಾವ್, ಈ ವೇಳೆ ಮಾತನಾಡಿ, ಸರಣಿ ರಜಾದಿನಗಳಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಾಗುವ ಕಾರಣದಿಂದಾಗಿ ಬೇರೆ ಕಡೆಗಳಿಂದ ನಗರಕ್ಕೆ ಬರುವ ಬಸ್‌ಗಳು ಬೈಪಾಸ್ ಮೂಲಕ ಸಾಗುವ ಕಾರಣದಿಂದಾಗಿ ಈ ಸಮಸ್ಯೆ ಉದ್ಭವಿಸುತ್ತಿದೆ. ಜತೆಗೆ ಶಿರಾ ಭಾಗದಿಂದ ತುಮಕೂರು ಕಡೆಗೆ ಹೋಗಿ, ಮರಳಿ ಬರಲು, ತುಮಕೂರು ನಗರದಲ್ಲಿ ಕೆರೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಬಸ್‌ಗಳು ಹೋಗಿ ವಾಪಾಸ್ಸು ಬರಲು ವಿಳಂಬವಾಗುವ ಕಾರಣದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: Job News: ಕೇಂದ್ರ ಸರ್ಕಾರದಿಂದ ‘ಎಲೆಕ್ಟ್ರಾನಿಕ್’ ಯೋಜನೆ; 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ!
ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವುದಾಗಿ ಈ ವೇಳೆ ಅವರು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಪ್ರಯಾಣಿಕರು ಹಾಗೂ ಇತರರು ಪಾಲ್ಗೊಂಡಿದ್ದರು.