ಶಿರಾ: ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವಂತೆ ಶಾಸಕ ಟಿ.ಬಿ.ಜಯಚಂದ್ರ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ (Shira News) ನೀಡಿದರು.
ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ಮುಂಗಾರು ಹಂಗಾಮಿಗೆ ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವ ಬಿತ್ತನೆ ಬೀಜ ವಿತರಿಸಿ, ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಅವರು, ಸರ್ಕಾರದ ರಿಯಾಯಿತಿ ದರದ ಬೀಜ, ಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ರೈತರು ಪಡೆದುಕೊಂಡು ಉತ್ತಮ ಕೃಷಿ ಕೈಗೊಳ್ಳಬೇಕು. ಮುಂಗಾರು ಹಂಗಾಮಿಗೆ ಬೀಜಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ವಿತರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ತಹಸೀಲ್ದಾರ್ ದತ್ತಾತ್ರೇಯ ಗಾದ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಕಾಂಗ್ರೆಸ್ ಯುವ ಮುಖಂಡ ಅಜಯ್ ಗಾಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಟಿ.ಬಿ.ಜಯಚಂದ್ರ
ಶಿರಾ: ಪರಿಸರ ಸಂರಕ್ಷಣೆಗೆ ಇಂದು ತುರ್ತು ಆದ್ಯತೆ ನೀಡಬೇಕಾಗಿದೆ. ಪರಿಸರ ದಿನಾಚರಣೆಯು ಕೇವಲ ಒಂದು ದಿನ ಮತ್ತು ಪ್ರಚಾರಕ್ಕೆ ಸೀಮಿತವಾಗದೇ ಇದು ನಿತ್ಯೋತ್ಸವ ಆಗಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಕರೆ ನೀಡಿದರು.
ನಗರದ ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದಲ್ಲಿ ಸೋಮವಾರ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದೆ. ನಾವು ಸೇವಿಸುವ ಗಾಳಿ, ನೀರು ಎಲ್ಲವೂ ಕಲುಷಿತಗೊಂಡಿವೆ. ನಗರದಲ್ಲಿ ಕೈಗಾರಿಕೆಗಳು ಹೆಚ್ಚಾಗುತ್ತಿದ್ದು, ಇದರಿಂದಾಗಿ ನಿತ್ಯವೂ ಪರಿಸರ ಹಾನಿಯಾಗುತ್ತಿದೆ ಎಂದ ಅವರು, ಪ್ರಕೃತಿ ನಮಗೆ ಎಲ್ಲವೂ ನೀಡಿದೆ. ಆದರೆ ನಾವು ಪ್ರಕೃತಿಯ ಮೇಲೆ ದಾಳಿ ನಡೆಸುತ್ತಿದ್ದೇವೆ. ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ನಗರಗಳು ವೇಗವಾಗಿ ಬೆಳೆಯುತ್ತಿವೆ. ಕೈಗಾರಿಕೆಗಳು ಬೆಳೆಯುತ್ತಿವೆ. ಈ ಎಲ್ಲಾ ಬೆಳೆವಣಿಗೆಗಳು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿವೆ. ಎಲ್ಲಿ ಮಳೆ ಬರಬೇಕು ಅಲ್ಲಿ ಮಳೆ ಆಗುತ್ತಿಲ್ಲ. ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯಿಂದ ಇಂತಹ ಪ್ರಕೃತಿಕ ವಿಕೋಪಗಳು ನಡೆಯುತ್ತಿವೆ. ಈ ಎಲ್ಲಾ ವಿಕೋಪಗಳಿಗೆ ಮನುಷ್ಯನೇ ಕಾರಣ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸಿ, ಬೆಳೆಸಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!
ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ವೆಂಕಟೇಶಯ್ಯ, ಆರ್‌ಎಫ್‌ಒ ನವನೀತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ನಗರಸಭೆ ಪೌರಾಯುಕ್ತ ರುದ್ರೇಶ್, ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಬಾಯಿ, ಕಾಂಗ್ರೆಸ್ ಮುಖಂಡ ಅಜೇಯ ಗಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.